ರಾಜ್ಯ ಸರ್ಕಾರದ ಸಹಕಾರ ಇಲ್ಲದೆ ಕೇಂದ್ರದ ರಸ್ತೆ ಅಗಲೀಕರಣ ಕಾಮಗಾರಿ ಅನುಷ್ಠಾನ ಕಷ್ಟ
ಕಾರವಾರ 04: ರಾಜ್ಯ ಸರ್ಕಾರದ ಸಹಕಾರ ಇಲ್ಲದೆ ಕೇಂದ್ರದ ಯೋಜನೆಗಳ ಅನುಷ್ಠಾನ ಕಷ್ಟ ಎಂದು ಕೆನರಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಕಾರವಾರದಲ್ಲಿ ಶನಿವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲವು ಕಡೆ ಭೂ ಸ್ವಾಧೀನ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊಟ್ಟಿಲ್ಲ. ಹೀಗಿರುವಾಗ ಐಆರ್ ಬಿ ಕಾಮಗಾರಿ ಮಾಡುವುದು ಹೇಗೆ? ನಾನು ಸಂಸದ ಆದ ಮೇಲೆ ನಿಂತಿದ್ದ ಹೆದ್ದಾರಿ ಕಾಮಗಾರಿ ಆರಂಭವಾಗಿದೆ ಎಂದರು. ಕುಸಿದಿದ್ದ ಕಾಳಿ ಸೇತುವೆ ಅವಶೇಷ ಎತ್ತುವ ಕೆಲಸ ನಡೆದಿದೆ. ಅದೇ ಸ್ಥಳದಲ್ಲಿ ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣವಾಗಲಿದೆ.
ಶರಾವತಿ ನದಿಯ ಹಳೆಯ ಸೇತುವೆಯ ಜಾಗದಲ್ಲಿ ಹೊಸ ಸೇತುವೆ ಸಹ ನಿರ್ಮಾಣ ಆಗಲಿದೆ ಎಂದರು. ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿಕೊಡದ ಕಾರಣ ಕೆಲವು ಕಡೆ ಕೆಲಸ ನಿಂತಿದೆ. ಹಾಗೆಯೇ ಜನರ ಅಸಹಕಾರದಿಂದ ಹೊನ್ನಾವರ ,ಕುಮಟಾ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಿಂತಿದೆ. ಜನರು ಸಹ ಸಹಕಾರ ಕೊಡಬೇಕು. ಸ್ವತಃ ನಾನೇ ಜನರ ಮನವೊಲಿಸುವ ಕೆಲಸ ಮಾಡುವೆ ಎಂದರು . ಕುಮಟಾ -ಶಿರಸಿ ಹೆದ್ದಾರಿ ಅಗಲೀಕರಣಕ್ಕೆ ಸಹ ಭೂ ಸ್ವಾಧೀನ ಆಗದ ಕಾರಣ ಕಾಮಗಾರಿಗೆ ತೊಂದರೆ ಆಗಿದೆ. ಕತಗಾಲದಿಂದ ಶಿರಸಿ ಕಡೆಗೆ 6 ಕಿ.ಮೀ. ರಸ್ತೆ ಪಕ್ಕ ಭೂಸ್ವಾಧೀನ ಕೆಲಸ ರಾಜ್ಯ ಸರ್ಕಾರದಿಂದ ಬಾಕಿಯಿದೆ. ಹನ್ನೊಂದು ಸೇತುವೆಗಳ ನಿರ್ಮಾಣದ ಕೆಲಸ ನಡೆದಿದೆ. ಆದರೆ ರಸ್ತೆ ವಾಹನ ಸಂಚಾರ ಫೆಬ್ರುವರಿ ಅಂತ್ಯಕ್ಕೆ ಮುಕ್ತವಾಗುವುದಿಲ್ಲ. ವಾಹನ ಸಂಚಾರಕ್ಕೆ ರಸ್ತೆ ಬಂದ್ ಆದೇಶ ಇನ್ನು ಕೆಲ ತಿಂಗಳು ಮುಂದುವರಿಯಲಿದೆ ಎಂಬ ಸುಳಿವು ನೀಡಿದರು.