ಅಪ್ರಾಪ್ತರು ಗುಟ್ಕಾ ವ್ಯಸನಿಗಳಾಗುತ್ತಿರುವುದು ದುರಂತ : ಹನುಮಂತಗೌಡ
ಹಾವೇರಿ: ಒಂದು ಬಾರಿ ಗುಟ್ಕಾ ಸೇವನೆಯಿಂದ ಸಾವಿರ ವಿಧವಾದ ರಾಸಾಯನಿಕಗಳು ನಮ್ಮ ದೇಹ ಸೇರುತ್ತವೆ, ಆತಂಕಕಾರಿ ವಿಷಯ ಎಂದರೆ ಪ್ರತಿ ವರ್ಷ ಭಾರತದಲ್ಲಿ 55000 ಅಪ್ರಾಪ್ತರು ಗುಟ್ಕಾ ವ್ಯಸನಿಗಳಾಗುತ್ತಿರುವುದು ದುರಂತ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ಬುಧವಾರ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರಿ್ಡಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಗರ್ಭಿಣಿಯರು ಬೇರೆಯವರು ಬಿಟ್ಟ ಹೊಗೆ ಸೇವಿಸಿದರೆ ಗರ್ಭ ಶಿಶುವಿಗೆ ಕ್ಯಾನ್ಸರ್ ತಗಲುವ ಅಪಾಯವಿದೆ. ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನಂತರ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚು ಮಾಡುತ್ತಾರೆ. ಚಟ ಚಟಕ್ಕೆ ಅವಕಾಶ ಮಾಡಿಕೊಟ್ಟರೆ, ಅಮಲು ಸರ್ವನಾಶಕ್ಕೆ ನಾಂದಿ ಎಂದು ಅನೇಕ ಉದಾಹರಣೆಗಳ ಮೂಲಕ ಅವರು ತಿಳಿಸಿದರು. ಮುಖ್ಯೋಪಾಧ್ಯಾಪಕ ದೇವೇಂದ್ರ್ಪ ಬಸವಮ್ಮನವರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹದಿ ಹರೆಯದ ವಯಸ್ಸು ಅತ್ಯಂತ ಅಪಾಯಕಾರಿ, ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯ ಸಂಪತ್ತನ್ನು ಕಾಯ್ದುಕೊಳ್ಳಬೇಕು, ಆರೋಗ್ಯವಂತರು ಮಾತ್ರ ದೇಶಕ್ಕೆ ಸಂಪತ್ತು ಎಂದರು. ಹಿರಿಯ ಶಿಕ್ಷಕಿ ಶಕುಂತಲಾ ಪೂಜಾರ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಎ. ಸುರಹೊನ್ನಿ ಮಾತನಾಡಿದರು. ಹಿರಿಯ ಶಿಕ್ಷಕ ಬಿ. ಎಚ್. ಹೆಬ್ಬಾಳ, ಧರ್ಮಸ್ಥಳ ಸಂಸ್ಥೆಯ ಸ್ವಸಹಾಯ ಸಂಘದ ಸದಸ್ಯರು, ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಮೇಲ್ವಿಚಾರಕಿ ದೀಪಾರಾಣಿ ಸ್ವಾಗತಿಸಿ ಪ್ರಾಥಮಿಕವಾಗಿ ಮಾತನಾಡಿದರು, ಸೇವಾ ಪ್ರತಿನಿಧಿ ಲಕ್ಷ್ಮಿ ವಂದಿಸಿದರು.