ಸ್ವದ್ಯೋಗ ಮಾಡಲು ಆಸಕ್ತಿ ಮುಖ್ಯವಾಗಿದೆ : ಯೋಗೇಶ ಎ.
ಗದಗ 07: ಸ್ವ ಉದ್ಯೋಗ ಮಾಡಲು ನಮಗೆ ಮೊದಲು ಮನಸ್ಸು ಹಾಗೂ ಆಸಕ್ತಿ ಇರಬೇಕು ಅಂದರೆ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮರ್ಸಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ. ಅವರು ಹೇಳಿದರು.
ನಗರದ ಪಂಚಾಕ್ಷರಿ ವಲಯದ ಪಂಚಾಕ್ಷರಿ ಕಾರ್ಯ ಕ್ಷೇತ್ರದಲ್ಲಿ ಧರ್ಮ ಜ್ಯೋತಿ ಜ್ಞಾನವಿಕಾಸ ಹಾಗೂ ಸಾಯಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮೂರು ತಿಂಗಳು ಉಚಿತ ಹೊಲಿಗೆ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲಾ ತರಬೇತಿದಾರರು ಸ್ವ ಉದ್ಯೋಗ ಮಾಡಿ ಸ್ವಾವಲಂಭಿ ಜೀವನ ರೂಪಿಸಿಕೊಳ್ಳಬೇಕು ಮತ್ತು ತಾವು ತಯಾರಿಸಿರುವ ಬಟ್ಟೆಯನ್ನು ಆನ್‌ಲೈನ್ ಮುಖಾಂತರ ಕೂಡ ವ್ಯಾಪಾರ ಮಾಡಿ ಉದ್ಯೋಗ ಅಭಿವೃದ್ದಿಗೊಳಿಸಬಹುದು. ಅದರ ಜೊತೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಟೆಲ್‌ರಿಂಗ್ ಮಷೀನ್ ಖರೀದಿ ಮಾಡಲು ನಮ್ಮಲ್ಲಿ ಪ್ರಗತಿ ನಿಧಿ ಪಡೆದುಕೊಂಡು ಉದ್ಯೋಗ ಮಾಡಬಹುದು ಎಂದು ಹೇಳಿದರು.
ವಕೀಲರಾದ ಬಸವರಾಜ ಅವರು ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ನಾಯಕ, ಪಂಚಾಕ್ಷರಿ ವಲಯದ ಅಧ್ಯಕ್ಷರಾದ ವಾಣಿಶ್ರೀ ಸೋಲಾಪಟ್ಟಿ, ಪ್ರೇಮಾ ಕಡೇಮನಿ, ಒಕ್ಕೂಟದ ಅಧ್ಯಕ್ಷರು ಹಾಗೂ ಟೈಲರಿಂಗ್ ಶಿಕ್ಷಕರಾದ ಆಶಾ ಮತ್ತು ಜ್ಞಾನ ವಿಕಾಸ ಸಮನ್ವಯ್ಯಾಧಿಕಾರಿ ಗಂಗಮ್ಮ, ಸುಜಾತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.