ಲಿಂಗತ್ವ ಅಲ್ಪಸಂಖ್ಯಾತರಿಗೆ ಐಡಿ ಕಾರ್ಡ್ ನೀಡಲು ಸೂಚನೆ -ಡಾ.ವಿಜಯಮಹಾಂತೇಶ ದಾನಮ್ಮನವರ
ಹಾವೇರಿ 06: ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಪತ್ರ(ಐಡಿ ಕಾರ್ಡ್) ನೀಡುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಲಿಂಗತ್ವ ಅಲ್ಪಸಂಖ್ಯಾತರ ಪುರ್ನವಸತಿ ಯೋಜನೆ, ಧನಶ್ರೀ, ಚೇತನ, ಉದ್ಯೋಗಿ ಹಾಗೂ ಮಾಜಿ ದೇವದಾಸಿ ಪುರ್ನವಸತಿ ಯೋಜನೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುತಿನ ಚೀಟಿಯಿಂದ ಸರ್ಕಾರದ ಯೋಜನೆ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಹಾಗಾಗಿ ಆದ್ಯತೆ ಮೇರೆಗೆ ಈ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಾಗಾರ ಆಯೋಜಿಸುವ ಮೂಲಕ ಐಡಿ ಕಾರ್ಡ್ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀ ನಿವಾಸ್ ಆಲದರ್ತಿ ಅವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಪುರ್ನವಸತಿ ಯೋಜನೆಯಡಿ 12 ಗುರಿ ಇದ್ದು, 9 ಅರ್ಜಿಗಳು ಸಲ್ಲಿಕೆಯಾಗಿವೆ. ಧನಶ್ರೀ ಯೋಜನೆಯಡಿ 15 ಗುರಿಗೆ 20 ಅರ್ಜಿಗಳು ಸಲ್ಲಿಕೆಯಾಗಿವೆ, ಚೇತನ ಯೋಜನೆಯಡಿ 14 ಗುರಿಗೆ 49 ಅರ್ಜಿಗಳು ಬಂದಿದ್ದು, ಈ ಪೈಕಿ 13 ಜನರು ಅರ್ಹರಾಗಿದ್ದಾರೆ. ಉದ್ಯೋಗಿನಿ ಯೋಜನೆಯಡಿ 9 ಗುರಿ ಇದ್ದು, ಐದು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 1993-94 ಹಾಗೂ 2007-08 ಸಮೀಕ್ಷೆಯಲ್ಲಿ 990 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದ್ದು, ಈ ಪೈಕಿ 459 ಮಾಜಿ ದೇವದಾಸಿ ಮಹಿಳೆಯರು ಜೀವಂತವಾಗಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ದೇವದಾಸಿ ಪುರ್ನವಸತಿ ಯೋಜನೆಯಡಿ ಆದಾಯಕರ ಉತ್ಪನ್ನ ಚಟುವಟಿಕೆಗೆ ರೂ.30 ಸಾವಿರ ಸಹಾಯಧನ ನೀಡಲಾಗುತ್ತಿದೆ. ಈವರೆಗೆ 448 ಮಾಜಿ ದೇವದಾಸಿ ಮಹಿಳೆಯರಿಗೆ ಸೌಲಭ್ಯ ಪಡೆದಿರುತ್ತಾರೆ. 45 ವರ್ಷ ಮೀರಿದ 451 ಮಾಜಿ ದೇವದಾಸಿಯರಿಗೆ ರೂ.1500 ಮಾಶಾಸನ ನೀಡಲಾಗುತ್ತಿದೆ. ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ನಿವೇಶನ ಹೊಂದಿದ 210 ದೇವದಾಸಿ ಮಹಿಳೆಯರಿಗೆ ನಿಗದಮ ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿ.ಪಂ.ಉಪಕಾರ್ಯ ದರ್ಶಿ ಡಾ.ರಂಗಸ್ವಾಮಿ, ಡಿ ವೈ ಎಸ್ ಪಿ ಪಾಟೀಲ, ಡಾ. ನೀಲೇಶ್, ಮಾಜಿ ದೇವದಾಸಿ ಪುನರ್ವಸತಿ ಯೋಜನೆ ನೋಡಲ್ ಅಧಿಕಾರಿ ಮಧುಸೂಧನ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಟ್ರಾನ್ಸ್ ಜಂಡರ್ ಮಹ್ಮದ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.