ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಉತ್ತಮ ಆಡಳಿತ ವಾರ ಕಾರ್ಯಾಗಾರ ಉದ್ಘಾಟನೆ

Inauguration of District Level Good Governance Week Workshop by District Administration

ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಉತ್ತಮ ಆಡಳಿತ ವಾರ  ಕಾರ್ಯಾಗಾರ ಉದ್ಘಾಟನೆ

ಹಾವೇರಿ 23 : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಿದಾಗ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ನಿವೃತ್ತ ಉಪ ಕಾರ್ಯದರ್ಶಿ ಸೋಮಶೇಖರ್ ಬಿ ಮುಳ್ಳಳ್ಳಿ ಹೇಳಿದರು.  

ಜಿಲ್ಲಾಡಳಿತದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ಉತ್ತಮ ಆಡಳಿತ ವಾರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಉತ್ತಮ ಆಡಳಿತ ರಾಜ್ಯ ಎಂದು ಕರೆಯಲ್ಪಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಆಡಳಿತ ವ್ಯವಸ್ಥೆಯು ಪಾರದರ್ಶಕವಾಗಿರಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಆಡಳಿತದಲ್ಲಿ ಪಾಲುದಾರಿಯನ್ನಾಗಿ ಮಾಡಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಮೊದಲು ಯೋಜನೆಗಳು ಕೇಂದ್ರೀಕೃತವಾಗಿದ್ದವು ಇದರಿಂದ ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಯೋಜನೆಗಳ ಕುರಿತು ಯಾವುದೇ ಮಾಹಿತಿ ತಲುಪುತ್ತಿರಲಿಲ್ಲ, ಈಗ ಸರ್ಕಾರವು ಉತ್ತಮ ಆಡಳಿತದ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿ ನೀಡಿ, ಅವರಿಗೆ ಅವಶ್ಯಕವಿರುವ ಯೋಜನೆಗಳ ಸೌಲಭ್ಯವನ್ನು ನೀಡಿ ಉತ್ತಮ ಆಡಳಿತ ನೀಡುತ್ತಿದೆ ಎಂದರು. 

ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ತನ್ನ ಅವಶ್ಯಕತೆಗಳನ್ನು ಹುಡುಕಿಕೊಂಡು ಕಚೇರಿಗೆ ಬಂದಂತಹ ಜನರೊಂದಿಗೆ ಸೌಜನ್ಯವಾಗಿ ವರ್ತಿಸಿ, ಉತ್ತಮ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಅವಶ್ಯಕವಿರುವ ಸರ್ಕಾರದ ಸೌಲಭ್ಯಗಳನ್ನು ತಿಳಿಪಡಿಸಿ, ಅದರ ಉಪಯುಕ್ತತೆಯನ್ನು ಅವರುಗಳಿಗೆ ದೊರಕಿಸಿಕೊಟ್ಟಲ್ಲಿ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದರು. 

ಬಳಿಕ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ, ಪ್ರತಿ ವರ್ಷ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟುಹಬ್ಬದ ಪ್ರಯುಕ್ತ ಉತ್ತಮ ಆಡಳಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಇಲಾಖೆಯು ಡಿಸೆಂಬರ್ 19 ರಿಂದ 24ರ ವರೆಗೆ ಪ್ರಶಾಸನ್ ಗಾಂವ್ ಕಿ ಓರ್ ಅಭಿಯಾನ ಎಂಬ ಘೋಷವಾಕ್ಯದೊಂದಿಗೆ ಉತ್ತಮ ಆಡಳಿತ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.ಆಡಳಿತವೆಂದರೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ತೆಗೆದುಕೊಂಡ ತೀರ್ಮಾನವನ್ನು ಹೇಗೆ ಪರಿಹಾರಿಕೊಳ್ಳುತ್ತೇವೆ ಎಂಬುವುದೇ ಆಡಳಿತವಾಗಿದೆ ಎಂದರು. ಉತ್ತಮ ಆಡಳಿತ ವ್ಯವಸ್ಥೆಯ ಮುಖ್ಯ ಉದ್ದೇಶ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆಹರಿಸುವುದು ಹಾಗೂ ಗರಿಷ್ಠ ಪ್ರಮಾಣದಲ್ಲಿ ಸೇವೆ ಒದಗಿಸುವುದಾಗಿದೆ. ಅದರಲ್ಲೂ ಮುಖ್ಯವಾಗಿ ಆಡಳಿತವನ್ನು ಗ್ರಾಮೀಣ ಭಾಗದ ಜನರ ಬಳಿ ತೆಗೆದುಕೊಂಡು ಹೋಗುವುದು ಮತ್ತು ಅಭಿವೃದ್ಧಿಪಡಿಸುವುದಾಗಿದೆ ಎಂದರು.  

ಈಗಾಗಲೇ ಇ-ಆಡಳಿತದ ಮೂಲಕ ಸಾಕಷ್ಟು ಯೋಜನೆಗಳನ್ನು ಜನರ ಬಾಗಿಲಗೆ ತೆಗೆದುಕೊಂಡು ಹೋಗಿ ಕಡಿಮೆ ಅವಧಿಯಲ್ಲಿ ಯೋಜನೆಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ ಇದು ಉತ್ತಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಬಳಿಕ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಆಡಳಿತದಲ್ಲಿ ಆಡಳಿತವನ್ನು ಸರಳತೆ, ಪರಿಣಾಮಕಾರಿ ಹಾಗೂ ದಕ್ಷತೆಯಿಂದ ನಿರ್ವಹಿಸುವುದಾಗಿದೆ ಎಂದರು. ಆಡಳಿತದಲ್ಲಿ ವಿನಾಕಾರಣ ಗೊಂದಲವನ್ನು ತರಬಾರದು, ಕೆಲಸವನ್ನು ಸಾವಧಾನವಾಗಿ, ಪ್ರಬುದ್ಧವಾಗಿ, ಯೋಜನಬದ್ದವಾಗಿ ತಿಳಿದುಕೊಂಡು ಪರಿಣಾಮಕಾರಿಯಾಗಿ ನಿರ್ವಹಿಸವುದಾಗಿದೆ ಎಂದರು.ಕಾರ್ಯಾಗಾರದಲ್ಲಿ ಕುಣಿಮೆಳ್ಳಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅರವಿಂದ ಐರಾಣಿ ಇವರು ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಲ್ ನಾಗರಾಜ್, ಜಿಲ್ಲಾ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ನಗರಭಿವೃದ್ಧಿ ಕೋಶದ ಯೋಜನಾಧಿಕಾರಿ ಶ್ರೀಮತಿ ಮಮತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.