ಮಲ್ಲಿಗಾರ ಗ್ರಾಮದ ವಾಲ್ಮೀಕಿ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬಾಲಕರ ವಿದ್ಯಾರ್ಥಿ ನಿಲಯವನ್ನು ಉದ್ಘಾಟನೆ : ಶ್ರೀನಿವಾಸ ಮಾನೆ
ಹಾನಗಲ್ 04 :ತಾಲೂಕಿನ ಮಲ್ಲಿಗಾರ ಗ್ರಾಮದ ವಾಲ್ಮೀಕಿ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.
ಶಾಸಕ ಮಾನೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 62 ವಿದ್ಯಾರ್ಥಿ ನಿಲಯಗಳನ್ನು ಹೊಸದಾಗಿ ಆರಂಭಿಸಲಾಗುತ್ತಿದ್ದು, ಈ ಪೈಕಿ ಹಾನಗಲ್‌ನಲ್ಲಿ ಸಹ ಒಂದು ವಿದ್ಯಾರ್ಥಿ ನಿಲಯ ಆರಂಭವಾಗುತ್ತಿದೆ. ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳಿಲ್ಲದೇ ತೊಂದರೆ ಉಂಟಾಗಿದೆ. ಹಾಗಾಗಿ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಗಮನ ನೀಡಲಾಗಿದೆ. ಮೆಟ್ರಿಕ್ ನಂತರದ ಸಾಮಾನ್ಯ ಕೋರ್ಸುಗಳ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿ ನಿಲಯದಿಂದ ಅನುಕೂಲ ಪಡೆಯಲಿದ್ದಾರೆ ಎಂದು ಹೇಳಿದ ಅವರು ತಾಲೂಕಿನಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಓದಿಗೆ ಪೂರಕವಾದ ಉತ್ತಮ ವಾತಾವರಣ ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಅವಕಾಶ ಸಿಗದವರಿಗೆ ವಿದ್ಯಾಸಿರಿ ಯೋಜನೆಯ ಮೂಲಕ ಆರ್ಥಿಕ ಸಹಾಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸದಸ್ಯರಾದ ವಿರುಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಸಾಂವಸಗಿ ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಉಪಾಧ್ಯಕ್ಷೆ ಬಿಬಿಜಾನ ಮುರಡಿ, ಸದಸ್ಯ ಶಿವಮೂರ್ತೆಪ್ಪ ಚರಂತಿಮಠ, ಮುಖಂಡರಾದ ರಾಜೂ ಗುಡಿ, ಮರಿಗೌಡ ಪಾಟೀಲ, ಪರಶುರಾಮ ಲಮಾಣಿ, ಕಲೀಂ, ಎಂ.ಎಸ್.ಪಾಟೀಲ, ಮಲ್ಲೇಶಪ್ಪ ಬಿದರಮಳಿ, ಸಿ.ಜಿ.ಪಾಟೀಲ, ಹಿಂದುಳಿದ ವರ್ಗಗಳ ತಾಲೂಕಾ ಕಲ್ಯಾಣಾಧಿಕಾರಿ ಎಸ್.ಆನಂದ, ಶಿವಕುಮಾರ ಭದ್ರಾವತಿ, ವಿನಯ ಬಂಕನಾಳ, ರಾಜಕುಮಾರ ಶಿರಪಂತಿ ಸೇರಿದಂತೆ ಅನೇಕರಿದ್ದರು.