ಬಸಾಪುರ ಗ್ರಾಮದಲ್ಲಿ ನಡೆದ ಬಸಾಪುರ ಆಲದಮ್ಮದೇವಿ ಹಾಗೂ ಇಪ್ಪಿಕೊಪ್ಪ ಆಲದಮ್ಮದೇವಿ ದೇವಸ್ಥಾನ ಉದ್ಘಾಟನೆ,
ಹಾವೇರಿ 06 :ಸರಳತೆ ಇಂದಿನ ಆದರ್ಶವಾಗಿದ್ದು,ಮದುವೆ ನೆಪದಲ್ಲಿ ಎಲ್ಲರೂ ದುಂದು ವೆಚ್ಚ ಕೈ ಬಿಟ್ಟು ಸರಳ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಬಸಾಪುರ ಆಲದಮ್ಮದೇವಿ ಹಾಗೂ ಇಪ್ಪಿಕೊಪ್ಪ ಆಲದಮ್ಮದೇವಿ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಅನೇಕ ರಾಜಕಾರಣಿಗಳು,ನಟ-ನಟಿಯರು ಮಾಡಿಕೊಳ್ಳುವ ಅದ್ದೂರಿ ಮದುವೆಗಳು ಅನಗತ್ಯ ದುಂದು ವೆಚ್ಚ ಆಗುತ್ತವೆ. ತಮ್ಮ ಮಕ್ಕಳ ಮದುವೆಯ ಜತೆಗೆ ಆರ್ಥಿಕವಾಗಿ ಬಡವರ ಮದುವೆಗಳನ್ನು ನೆರವೇರಿಸಿದರೆ ಪುಣ್ಯದ ಜತೆಗೆ ದೇಶಕ್ಕೆ ಆರ್ಥಿಕವಾಗಿ ಲಾಭ ಮಾಡಿದಂತಾಗುತ್ತದೆ. ಹಾಗಾಗಿ ನೂತನ ವಧು-ವರರು ಆಡಂಬರದ ಮದುವೆ ಬೇಡ ಎಂಬುದರನ್ನು ಅರಿತುಕೊಂಡು ಸರಳ ಬದುಕು ಸಾಗಿಸಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಅದೇ ರೀತಿ ಬಸಾಪುರ ಗ್ರಾಮಸ್ಥರು ಭಕ್ತಿಯ ಧ್ಯೋತಕವಾಗಿ ನಿಷ್ಕಲ್ಮಶ ಭಕ್ತಿಯಿಂದ ಉಭಯ ದೇವಿಯರ ದೇವಸ್ಥಾನವನ್ನು ನಿರ್ಮಿಸಿ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದೀರಿ. ತಮ್ಮ ಮನೆಯಂತೆಯೇ ದೇವಸ್ಥಾನದ ಸ್ವಚ್ಛತೆ, ಶಿಸ್ತು, ಶಾಂತತೆ, ಪಾವಿತ್ರ-್ಯತೆಗೆ ಶ್ರಮಿಸಬೇಕು. ಸೇವೆ, ತನು,ಮನ,ಧನ, ಭಕ್ತಿಯಿಂದ ನಿರ್ಮಿಸಿದ ದೇಗುಲವನ್ನು ಉಳಿಸಬೇಕು ಎಂದರು.ಈ ವೇಳೆ 11 ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ವೇದಿಕೆಯಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ವೆಂಕಟೇಶ ನಾರಾಯಣಿ,ಅಶಕ ಯಲಿಗಾರ,ಮಾರುತಿ ಗೊರವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.