ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ, ಉದ್ಘಾಟನೆಗೆ ಕ್ಷಣಗಣನೆ

ಕಲಬುರಗಿ, ಫೆ 4 - ಬಿಸಿಲು ನಗರಿ ಕಲಬುರಗಿಯಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ಹಮ್ಮಿಕೊಂಡಿರುವ85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬುಧವಾರ ಉದ್ಘಾಟಿಸಲಿದ್ದಾರೆ. 

 ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ  ಬೆಳಿಗ್ಗೆ 11.30 ಗಂಟೆಗೆ ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಜರುಗುವ ನುಡಿ ಜಾತ್ರೆಗೆ ಚಾಲನೆ ಕೊಡಲಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಸ್ವಾಗತ ಸಮಿತಿಯ ಅಧ್ಯಕ್ಷ ಗೋವಿಂದ ಎಂ. ಕಾರಜೋಳ ಅತಿಥಿ ಗಣ್ಯರನ್ನು ಸ್ವಾಗತಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಆಶಯ ನುಡಿಗಳನ್ನಾಡುವರು. 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಹಿರಿಯ ಸಾಹಿತಿ, ಚಿಂತಕ ಡಾ. ಎಚ್.ಎಸ್. ವೆಂಟಕೇಶಮೂರ್ತಿ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಪರಿಷತ್ತಿನ ಪುಸ್ತಕಗಳು, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. 

 ಅಲ್ಲದೇ, ಪ್ರಸಿದ್ಧ ಶಿಲ್ಪಚಿತ್ರ ಕಲಾವಿದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ಚಿತ್ರಕಲಾ ಪ್ರದರ್ಶನ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ವಾಣಿಜ್ಯ ಮಳಿಗೆಗಳನ್ನು, ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮುಖ್ಯದ್ವಾರ ಉದ್ಘಾಟಿಸುತ್ತಾರೆ. 

 ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು  ಪುಸ್ತಕ ಮಳಿಗೆಗಳನ್ನು,  ಅಫಜಲಪುರ ಶಾಸಕ  ಎಂ.ವೈ. ಪಾಟೀಲ್ ಅವರು ಮಹಾಮಂಟಪ ಮತ್ತು ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. 

ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಕನೀಜ್ ಫಾತೀಮಾ, ಡಾ. ಅವಿನಾಶ ಜಾಧವ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಸಮ್ಮೇಳನದಲ್ಲಿ  ಪಾಲ್ಗೊಳ್ಳುವರು.