ಪ್ರಗತಿ ಪರೀಶೀಲನಾ ಸಭೆಯಲ್ಲಿ ಅಧ್ಯಕ್ಷರಾದ ಪಲ್ಲವಿ.ಜಿ ಸೂಚನೆ ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿ

In the progress review meeting, the chairman Pallavi.ji instructed to provide site facilities to th

ಪ್ರಗತಿ ಪರೀಶೀಲನಾ ಸಭೆಯಲ್ಲಿ ಅಧ್ಯಕ್ಷರಾದ ಪಲ್ಲವಿ.ಜಿ ಸೂಚನೆ ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿ 

ಬಳ್ಳಾರಿ 12: ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಅವರು ಹೇಳಿದರು. 

ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರಿ​‍್ಡಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರೀಶೀಲನೆ ಹಾಗೂ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಅಲೆಮಾರಿ ಸಮುದಾಯದವರು ಹೊಟ್ಟೆಪಾಡಿಗಾಗಿ ಅಲೆದಾಟ ನಡೆಸಿ ತಮ್ಮ ಜೀವನ ಸಾಗಿಸುತ್ತಾರೆ. ಮುಖ್ಯವಾಗಿ ಅವರಿಗೆ ನೆಲೆ ಇರುವುದಿಲ್ಲ. ಹಾಗಾಗಿ ಅವರಿಗೆ ಸೂರು ಕಲ್ಪಿಸುವುದು ಅಧಿಕಾರಿಗಳು ಆದ್ಯತೆಯಾಗಿ ಪರಿಗಣಿಸಬೇಕು ಎಂದು ತಿಳಿಸಿದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ದೊರಕಿಸಿಕೊಡಲು ಜಾಗ ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಯವರಿಂದ ಸೂಕ್ತ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡುವ ಕುರಿತು 2016 ರಲ್ಲಿ ಸರ್ಕಾರದ ಆದೇಶವಿದೆ ಎಂದು ಸಭೆಗೆ ತಿಳಿಸಿದರು. 

ಜಿಲ್ಲೆಯಲ್ಲಿರುವ ವಿವಿಧ ಅಲೆಮಾರಿ ಸಮುದಾಯದವರ ಜಾತಿ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ, ಆಯಾ ತಾಲ್ಲೂಕು ತಹಶೀಲ್ದಾರರು ಮತ್ತು ಇತರೆ ಇಲಾಖೆಗಳ ಜಂಟಿ ಸಹಯೋಗದಲ್ಲಿ ತಾಲ್ಲೂಕುವಾರು ಜಂಟಿ ಸರ್ವೇ ಕಾರ್ಯ ನಡೆಸಬೇಕು ಎಂದು ತಿಳಿಸಿದರು. 

ಅಧಿಕಾರಿಗಳು ಮತ್ತು ನಾಮ ನಿರ್ದೇಶಿತ ಸದಸ್ಯರ ಮಧ್ಯ ಸಮನ್ವಯತೆ ಇರಬೇಕು. ಈ ಸಮುದಾಯಗಳಿಗೆ ಸರ್ಕಾರದ ಯೋಜನೆಗಳಡಿ ಸೌಲಭ್ಯಗಳು ದೊರಕಿಸಬೇಕು ಎಂಬ ಉದ್ದೇಶದೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ಇದ್ದು, ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಸಭೆ ನಡೆಸಿ ಯೋಜನೆಗಳ ಲಾಭ ದೊರಕಿಸಲು ಮತ್ತು ಅರ್ಹ ಫಲಾನುಭವಿಗಳ ಆಯ್ಕೆಗೆ ನೆರವಾಗುವಂತೆ ಅವರು ಸಲಹೆ ನೀಡಿದರು. 

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಗಳಡಿ ಇರುವ ಗುರಿಗಳನ್ನು ನಿಗದಿತ ಅವಧಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು. 

*ಜಾಗೃತಿ ಕಾರ್ಯಕ್ರಮ ಆಯೋಜಿಸಿ:* 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ಮಕ್ಕಳು ಮುಖ್ಯ ವಾಹಿನಿಗೆ ಬರಬೇಕು. ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ. ಹಾಗಾಗಿ ಅವರಿರುವ ಜಾಗಗಳಲ್ಲಿ ಶಿಕ್ಷಣ ಕುರಿತು ಅರಿವು ಮೂಡಿಸುವ ಕೆಲವಾಗಬೇಕು ಎಂದು ಹೇಳಿದರು. 

ಅಲೆಮಾರಿ ಸಮುದಾಯದವರಿಗೆ ಭೂಮಿ, ನೆಲೆ, ಸೂರು ಮುಖ್ಯವಾಗಿ ಶಿಕ್ಷಣದಿಂದ ವಂಚಿತರಾಗಿ ಮೌಢ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಶಿಕ್ಷಣದ ಅರಿವು ಮೂಡಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಬಾಲ್ಯ ವಿವಾಹ ಪದ್ಧತಿಯಿಂದಾಗುವ ದುಷ್ಪರಿಣಾಮ ಕುರಿತು ತಿಳಿಸಬೇಕು. ಅಲೆಮಾರಿ ಸಮುದಾಯದವರಿಗಾಗಿಯೇ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ತಿಳಿಸುವ ಕೆಲಸ ಮಾಡಬೇಕು ಎಂದರು. 

*ಅಹವಾಲು ಸ್ವೀಕಾರ:* 

ಬಳಿಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಸಂಘ ಸಂಸ್ಥೆಗಳ ಮತ್ತು ಅಲೆಮಾರಿ ಸಮುದಾಯದ ಸಾಮಾನ್ಯ ಜನರಿಂದ ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕಾರ ಮಾಡಿದರು. 

ಮೂಲ ಜನಾಂಗದವರಿಗೆ ವಸತಿ ರಹಿತರಿಗೆ ವಸತಿ ಸೌಲಭ್ಯ, ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ, ಸಮುದಾಯ ಭವನ, ಸ್ಮಶಾನಕ್ಕೆ ದಾರಿ ಕಲ್ಪಿಸುವ ಕುರಿತು, ಭೂಮಿ ಹಂಚಿಕೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಕೆಯಾದವು. ಇದೇ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 

ಈ ವೇಳೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್‌.ಆನಂದ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಅನುಷ್ಟಾನ ಸಮಿತಿಯ ಸದಸ್ಯರು, ವಿವಿಧ ಅಲೆಮಾರಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.