ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಬಿಜೆಪಿ ಹೊಣೆಯಾಗುವುದಿಲ್ಲ : ಆರ್.ಅಶೋಕ
ರಾಣಿಬೆನ್ನೂರ 08: ವಕ್ಫ್ ವಿಚಾರದಲ್ಲಿ ಕಾಂಗ್ರೇಸ್ ಪಕ್ಷವು ರೈತರ ಜೀವನದ ಮೇಲೆ ಚಲ್ಲಾಟವಾಡುತ್ತಿದೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅನುಭವಿಸಲಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಬಿಜೆಪಿ ಹೊಣೆಯಾಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ರವಿವಾರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುತ್ತಾತನ ಕಾಲದಿಂದಲೂ ಈ ಜಾಗೆಯಲ್ಲಿ ವಾಸಿಸುತ್ತಿರುವ 30ಕ್ಕೂ ಅಧಿಕ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಅವರ ಕುತಂತ್ರ ರಾಜಕಾರಣ ಹಿನ್ನಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯಗಳ ಮತಗಳನ್ನು ಸೆಳೆಯಲು ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಮೈಸೂರಿನ ಮುನೇಶ್ವರ ನಗರವನ್ನು ಸಂಪೂರ್ಣ ವಕ್ಪ್ ಗೆ ನೀಡಲು ಸಿದ್ದತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರೀತಿ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದಕ್ಕೆ ಸರ್ಕಾರವೇ ನೇರ ಕಾರಣವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಕ್ಫ್ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡುವಂತೆ ಕಾನೂನು ಅಧಿಕಾರಕ್ಕೆ ತಂದರು. ಆದಾದ ನಂತರ 1 ಲಕ್ಷ ಕೋಟಿ ರೂ ಗೂ ಅಧಿಕ ಬೆಲೆಬಾಳುವ ಭೂಮಿ ಒಂದೇ ಬಾರಿಗೆ ವಕ್ಫ್ ಮಂಡಳಿಗೆ ಸೇರಿಬಿಟ್ಟಿತು. ಇವೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದೆ ಎಂದು ಅವರು ದೂರಿದರು.
ಇಲ್ಲಿನ ಗ್ರಾಮದ ರೈತರ ಮನೆಗಳನ್ನೂ ಜುಮ್ಮಾ ಮಸೀದಿ ಏಂದು ದಾಖಲೆ ಮಾಡಿದ್ದಾರೆ. ಅಲ್ಲದೇ ಇಲ್ಲಿ ಕೆರೆ ಇದೆ. ಮನೆಗಳು ಇವೆ ಯಾವ ಮಸೀದಿಯೂ ಇಲ್ಲ. ಮುತ್ತಾತನಿಂದ ಈ ಆಸ್ತಿಗಳು ಬಂದಿವೆ. ರೈತರಾಗಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬಡ ರೈತ ಕುಟುಂಬಗಳು ಜಾಗೆ ಇಲ್ಲದೆ ಎಲ್ಲಿ ಜೀವನ ನಡೆಸಬೇಕು ಎಂದು ತಿಳಿಯದೆ ಚಿಂತೆಗೀಡಾಗಿದ್ದಾರೆ ಎಂದು ಕಾಂಗ್ರೇಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಯಾರು ಚಿಂತಿಸಬೇಕಾಗಿಲ್ಲ. ನಿಮ್ಮ ಹಿಂದೆ ನಾವಿದ್ದೇವೆ. ನಿಮ್ಮ ಜಮೀನಿನಲ್ಲಿರುವ 9 ಮತ್ತು 11 ನೇ ಕಾಲಂ ನಲ್ಲಿರುವ ವಕ್ಫ್ ಇರುವುದನ್ನು ತಗೆದು ಹಾಕುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಳೆ ನಡೆಯಲಿರುವ ಬೆಳಗಾವಿಯ ಚಲಿಗಾಲದ ಅಧಿವೇಶನದಲ್ಲಿ ಈ ಕುರಿತು ಗೊತ್ತುವಳಿ ಮಂಡಿಸಲಾಗುವುದು. ಯಾವ ಕಾರಣಕ್ಕೂ ಬಿಜೆಪಿ ಪಕ್ಷ ರೈತರ ಪರವಾಗಿದೆ ಎಂದರು.
ರೈತರ ಜಮೀನು ವಕ್ಫ್ ಬೋರ್ಡ್‌ಗೆ ಸೇರಿದ ನಂತರ ನ್ಯಾಯಾಲಯಕ್ಕೆ ಹೋಗಲು ಅವಕಾಶ ವಿರುವುದಿಲ್ಲ. ಬದಲಾಗಿ ದಿಲ್ಲಿಯಲ್ಲಿರುವ ವಕ್ಫ್ ಬೋರ್ಡ್‌ಗೆ ಹೋಗಿ ಮನವಿ ಸಲ್ಲಿಸಬೇಕು. ಇದು ಕಾಂಗ್ರೇಸ್ ಜಾರಿಗೆ ಮಾಡಿದ ಕಾನೂನು ಆಗಿದೆ. ಆದರೆ ಮಂದಿರ ಹಾಗೂ ಮುಜುರಾಯಿಯಲ್ಲಿ ಹಿಂದೂಗಳು, ಸಿಖ್ ರು, ಜೈನರು, ಕ್ರೈಸ್ಥರು ಸೇರಿದಂತೆ ವಿವಿಧ ಧರ್ಮಗಳ ಜನರು ಇರುತ್ತಾರೆ. ಆದರೆ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಂರ ಹೊರತು ಬೇರೆಯವರಿಗೆ ಅವಕಾಶವಿಲ್ಲ. ಇದು ಭಾರತದ ದುರಂತವಾಗಿದೆ ಎಂದರು.
ನಮ್ಮದು ಮನೆಯೊಂದು ಮೂರು ಬಾಗಿಲು. ಕಾಂಗ್ರೇಸ್ ಅವರದು ಊರೆಲ್ಲಾ ಬಾಗಿಲಾಗಿದೆ ಎಂದು ಕಾಂಗ್ರೇಸ್ ನವರನ್ನು ಲೇವಡಿ ಮಾಡಿದ ಅವರು, ಈಗಾಗಲೇ ಗೃಹ ಸಚಿವ ಡಾಽ ಜಿ. ಪರಮೇಶ್ವರ, ಸಚಿವ ಕೆ.ಎಸ್.ಮುನಿಯಪ್ಪ ಅಧಿಕಾರ ಹಸ್ತಾಂತರವಾಗಬೇಕೆಂದು ಒತ್ತಾಯಗಳು ಆರಂಭವಾಗಿವೆ. ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನ ರಾಜಕಾರಣ ಕೊನೆಯ ಕಾಲದಲ್ಲಿದೆ ಎಂದಿದ್ದಾರೆ ಎಂದರು.
ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ, ಪರಮೇಶಪ್ಪ ಗೂಳಣ್ಣನವರ, ಪವಿತ್ರ ನಾಗೇನಹಳ್ಳಿ, ಜಟ್ಟೇಪ್ಪ ಕರೇಗೌಡ್ರ, ವಕ್ಪ್ ನೋಟೀಸ್ ಪಡೆದ ನಂಜಮ್ಮ ಗ್ಯಾನಗೌಡ್ರ, ಲಕ್ಷ್ಮವ್ವ ಮಡಿವಾರ ಸೇರಿದಂತೆ ಮತ್ತಿತರರು ಇದ್ದರು.