ಮನುಷ್ಯ ದುರಾಸೆ ಮನುಕುಲದ ಅಳುವಿಗೆ ಕೂಡ ಕಾರಣ - ಕೃಷಿ ವಿಜ್ಞಾನಿ ಡಾ. ನಾಗರತ್ನಾ

Human greed is also the reason for the demise of mankind - Agricultural scientist Dr. Nagaratna

ಮನುಷ್ಯ ದುರಾಸೆ ಮನುಕುಲದ ಅಳುವಿಗೆ ಕೂಡ ಕಾರಣ - ಕೃಷಿ ವಿಜ್ಞಾನಿ ಡಾ. ನಾಗರತ್ನಾ  

 ಧಾರವಾಡ 23 : ಪೃಥ್ವಿಯಲ್ಲಿ ಮೂಕ ಪ್ರಾಣಿ, ಪಕ್ಷಿ, ಸೂಕ್ಷ್ಮ ಜೀವಿಗಳು ಪ್ರಕೃತಿಗೆ ಹೊಂದಿಕೊಂಡೇ, ಜೀವನ ನಡೆಸುತ್ತಾನೆ. ಆದರೆ, ಬುದ್ಧಿಜೀವಿ ಮನುಷ್ಯ ಪ್ರಕೃತಿ ವಿರುದ್ಧವಾಗಿಯೇ ಬದುಕುತ್ತಿದ್ದಾನೆ ಎಂದು ಕೃಷಿ ವಿಜ್ಞಾನಿ ಡಾ. ನಾಗರತ್ನಾ ಬಿರಾದಾರ ಹೇಳಿದರು. ಹಸಿರೇ ಉಸಿರು ಧ್ಯೇಯವಾಕ್ಯದಡಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ನಗರದ ಜಿಲ್ಲಾ ಸಾಹಿತ್ಯ ಪರಿಷತ್ ಏಳನೇ ವರ್ಷದ ವಾರ್ಷಿಕೋತ್ಸವ ಅಂಹವಾಗಿ ಶನಿವಾರ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ದುರಾಸೆ ಮನುಕುಲದ ಅಳುವಿಗೆ ಕೂಡ ಕಾರಣವಾಗಲಿದೆ. ಪಂಚಭೂತ ಒಳಗೊಂಡ ಪರಿಸರ ಮಣ್ಣು, ನೀರು ಹಾಗೂ ವಾಯು ಕಲುಷಿತಗೊಂಡಿದೆ. ಭೂಮಿನ ತಾಯಿ ಅಂತ ಪೂಜಿಸುವ ಈ ನಾಡಿನಲ್ಲಿ ಅವಳಿಗೆ ವಿಷ ಉಣಿಸುವ ಕೆಲಸ ರೈತರು ಮಾಡುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದರು. ರಸಾಯನಿಕ ಗೊಬ್ಬರ ಬಳಕೆ ನಮ್ಮ ಭೂಮಿ ಬಂಜರಾಗಿದೆ. ಮಣ್ಣಿನ ಶಕ್ತಿ ಕ್ಷೀಣಿಸುತ್ತಿದೆ. ಪರಿಣಾಮ ಕೃಷಿ ಭೂಮಿ ಕಾಂಕ್ರೀಟ್ ರಸ್ತೆ ಆಗಿದೆ. ಇಂಥ ಮಣ್ಣಿನಿಂದ ಬಂದ ಆಹಾರ ಸೇವನೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಮನುಷ್ಯ ಆಯುಷ್ಯ ಕೂಡ ಕಡಿಮೆ ಆಗಲು ಕಾರಣ ಎಂದು ತಿಳಿಸಿದರು. ಮಣ್ಣಿನ ಪುನಶ್ಚೇತನಕ್ಕೆ ಸಗಣಿ ಸಾವಯವ ಅಥವಾ ಹಸಿರು ಎಲೆ ಗೊಬ್ಬರ ಬಳಸಬೇಕು. ಅಲ್ಲದೇ, ಮನುಷ್ಯ ಅಗತ್ಯಕ್ಕಿಂತ ಹೆಚ್ಚಹ ನೀರಿನ ಅಪವ್ಯಯ ಮಾಡುವುದು ಸಲ್ಲ. ನೀರಿನ ಸದ್ಬಳಿಕೆ ಅಡುಗೆ ಮನೆಯಿಂದ ಪ್ರಾರಂಭಿಸಬೇಕಿದೆ. ವಾಯುಮಾಲಿನ್ಯ ತಡೆ ಸರ್ಕಾರದ ನೀತಿ-ನಿಯಮ ರೂಪಿಸಬೇಕಿದೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಳಕೆ ಪರಿಣಾಮ ತಾಯಂದಿರ ಎದೆ ಹಾಲಿನಲ್ಲೂ ಪ್ಲಾಸ್ಟಿಕ್ ಕಣಗಳು ಇರುವುದು ಇತ್ತೀಚಿಗೆ ನಡೆದ ಸಂಶೋಧನೆ ದೃಢಪಡಿಸಿದೆ. ಹೀಗಾಗಿ ಆದಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ಪರಿಸರ ಸ್ನೇಹಿ ಜೀವನ ನಡೆಸಲು ಕರೆ ನೀಡಿದರು. ಸಾಹಿತಿ ಮಾರ್ತಂಡಪ್ಪ ಕತ್ತಿ ಮಾತನಾಡಿ, ಮನುಷ್ಯನ ದುರಾಸೆಗೆ ಪರಿಸರದಲ್ಲಿ ಅಲ್ಲೊಲ್ಲ-ಕಲ್ಲೊಲ ಸೃಷ್ಠಿ ಆಗುತ್ತಿದೆ.  ಪರಿಸರ ನಾಶದಿಂದ  ಹವಾಮಾನ ವೈಪರೀತ್ಯ ಊಹಿಗೂ ನಿಲುಕದು. ಹೀಗಾಗಿ ಇರುವ ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಹಸಿರು ಪರಿಸರ ಹೆಚ್ಚಿಸಲು ಕಿವಿಮಾತು ಹೇಳಿದರು.ಪ್ರಾಧ್ಯಾಪಕಿ ಡಾ.ವಿ.ಬಿ.ಸಾವಿಮಠ,  ಒಂದು ಮರ 200 ಜನರಿಗೆ ಆಮ್ಲಜನಕ ಪೂರೈಸಲಿದೆ. ಈ ಕಾರಣಕ್ಕೆ ಪ್ರತಿಯೊಬ್ಬರು ಹೆಚ್ಚೆಚ್ಚು ಗಿಡಗಳನ್ನು ನಡೆಬೇಕು ಎಂದು ಸಲಹೆ ನೀಡಿದರು. ಹಿರಿಯ ಸಾಹಿತಿ ಪದ್ಮಾ ಉಮರ್ಜಿ ಜಯತೀರ್ಥ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಸಂಸ್ಥಾಪಕ ಅಧ್ಯಕ್ಷೆ ಜಯಶ್ರೀ ಗೌಳಿ, ಪತ್ರಕರ್ತ ಮಹಾಂತೇಶ ಕಣವಿ ಇದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಮಂಡಳಿಗೆ ನಡೆಸಲಾದ ಕಸ ವಿಂಗಡಣೆ ಜಾಗೃತಿ ನಲಿ-ಕಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಜೊತೆ ಪೌರ ಕಾರ್ಮಿಕರ  ಶ್ರಮಿಕ ಮಹಿಳೆಯರಿಗೆ ಸನ್ಮಾನಸಿ ಗೌರವಿಸಲಾಯಿತು.