ಮಾನವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ: ಸಿಇಓ ಡಾ.ದೀಲೀಷ್ ಶಶಿ

ಮಾನವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ: ಸಿಇಓ ಡಾ.ದೀಲೀಷ್ ಶಶಿ Human development is true development: CEO Dr. Dileesh Shashi

ಕಾರವಾರ 02 : ಅಭಿವೃದ್ಧಿ ಎಂದರೆ ಮೂಲಭೂತ ಸೌಕರ್ಯಗಳು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದಲ್ಲ, ಅಸಮಾನತೆಯನ್ನು ತೊಡೆದ, ಮಾನವನ ಸಮಗ್ರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿಯಾಗಿದ್ದು, ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆಯಲ್ಲಿ ಜಿಲ್ಲೆಯ ಸಾರ್ವಜನಿಕರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟುಕೊಂಡು ವರದಿಯನ್ನು ತಯಾರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ ಹೇಳಿದರು. 

ಅವರು ಸೋಮವಾರ ಕ್ರಿಮ್ಸ್‌ ಸಭಾಂಗಣದಲ್ಲಿ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಉತ್ತರ ಕನ್ನಡ ವತಿಯಿಂದ, ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ 2031 ವರದಿ ತಯಾರಿಕೆಗೆ ಸಂಬಂಧಿಸಿದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಾನವ ಅಭಿವೃದ್ಧಿ ವರದಿಯು ಇಡೀ ಜಿಲ್ಲೆಯ ಸಾರ್ವಜನಿಕರ ಅಭಿವೃದ್ಧಿಯ ಕುರಿತಂತೆ ನಿಖರವಾದ ಅಂಕಿ ಅಂಶಗಳು ಮತ್ತು ಅವರ ಈಗಿನ ಜೀವನ ಸ್ಥಿತಿ ಮತ್ತು ಅದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ಹೊಸ ಯೋಜನೆಗಳ ಅನುಷ್ಠಾನ ಮಾಡಲು ಅನುಕೂಲವಾಗಲಿದ್ದು, ಈ ವರದಿ ತಯಾರಿಕೆಯಲ್ಲಿ ಎಲ್ಲಾ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಜಿಲ್ಲೆಯ ಮಾನವ ಅಭಿವೃದ್ಧಿಯಲ್ಲಿ ಯಾವುದೇ ಅಸಮಾನತೆ ಉಂಟಾಗದಂತೆ ಸುಸ್ಥಿರ ಅಭಿವೃದ್ಧಿಯನ್ನು ಒಳಗೊಂಡ ವರದಿಯನ್ನು ತಯಾರಿಸಬೇಕು ಎಂದರು. 

ಜಿಲ್ಲೆಯು 2031 ರಲ್ಲಿ ಸುಸ್ಥಿರ ಅಭಿವೃದ್ಧಿ ಹೊಂದುವ ಕುರಿತಂತೆ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತ ಮಾಹಿತಿಯನ್ನು ಒಳಗೊಂಡ ಸಮಗ್ರ ವರದಿ ತಯಾರಿಸುವಂತೆ ತಿಳಿಸಿದ ಅವರು, ಈ ವರದಿ ತಯಾರಿಕೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು, ಒಟ್ಟಾಗಿ ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸಿ, ಮುಂದಿನ ಪೀಳಿಗೆಗೆ ಅನುಕೂಲವಾಗುವಂತಹ ಅಭಿವೃದ್ಧಿಯ ವರದಿಯನ್ನು ಸಿದ್ದಪಡಿಸುವಂತೆ ತಿಳಿಸಿದರು. 

ಸಾಂಖ್ಯಿಕ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ಹಿರಿಯ ನಿರ್ದೇಶಕ ಎಸ್‌.ಬಸವರಾಜ್ ಮಾತನಾಡಿ, ದೇಶ ಅಥವಾ ರಾಜ್ಯದ ಅಭಿವೃದ್ಧಿಯನ್ನು ಜನತೆಯ ತಲಾ ಆದಾಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಿಂದ ಪರಿಗಣಿಸದೇ ಇವುಗಳ ಜೊತೆಗೆ ಅಲ್ಲಿನ ಜನರ ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟವನ್ನು ಆಧರಿಸಿ ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ 2014-15 ರಲ್ಲಿ ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸಿದ್ದು ಈಗ 10 ವರ್ಷಗಳ ನಂತರ ವರದಿ ತಯಾರಿಕೆ ಮಾಡಲಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ ಸರ್ಕಾರಗಳು ಜಾರಿಗೆ ತಂದ ಹಲವು ಯೋಜನಗಳು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಜೀವನಮಟ್ಟದಲ್ಲಿ ಆಗಿರುವ ಬದಲಾವಣೆ ಮತ್ತು ಸುಧಾರಣೆಗಳ ಬಗ್ಗೆ ಪರೀಶೀಲಿಸಿ ಇದನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳು, ಕೃಷಿ, ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಜಾರಿಗೆ ತರಬಹುದಾದ ಯೋಜನೆಗಳ ಬಗ್ಗೆ ಈ ವರದಿಯು ದಾರದೀಪವಾಗಲಿದ್ದು,  ಪ್ರಸ್ತುತ ಇರುವ ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕೂಡಾ ಸಾಧ್ಯವಾಗಲಿದ್ದು, ಈ ವರದಿ ತಯಾರಿಕೆ ಕಾರ್ಯದಲ್ಲಿ ಪ್ರತಿಯೊಂದು ಇಲಾಖೆಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದರು. 

    ಕ್ರಿಮ್ಸ್‌ ನ ಡೀನ್ ಡಾ.ಪೂರ್ಣಿಮಾ, ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್‌, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಂ.ಡಿ.ಆರ್ ಧಾರವಾಡದ, ಅರ್ಥಶಾಸ್ತ್ರ ವಿಭಾಗದ  ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್‌.ವಿ. ಹನಗೋಡಿ ಮಠ್ ಮತ್ತು ಡಾ.ನಾರಾಯಣ ಬಿಲ್ಲವ ಇದ್ದರು.  ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.