ವಿಶ್ವ ಪಶುವೈದ್ಯಕೀಯ ದಿನಾಚರಣೆ 2026 ಗ್ರಾಮೀಣ ಆರ್ಥಿಕತೆಗೆ ಹೈನುಗಾರಿಕೆ ಬಲ: ಸಚಿವ ಕೆ. ವೆಂಕಟೇಶ

ವಿಶ್ವ ಪಶುವೈದ್ಯಕೀಯ ದಿನಾಚರಣೆ 2026 ಗ್ರಾಮೀಣ ಆರ್ಥಿಕತೆಗೆ ಹೈನುಗಾರಿಕೆ ಬಲ: ಸಚಿವ ಕೆ. ವೆಂಕಟೇಶ World Veterinary Day 2026 Dairy farming is a strength for rural economy: Minister K. Venkatesh

ಬೆಳಗಾವಿ 25: ಗ್ರಾಮೀಣ ಭಾಗದಲ್ಲಿ ಜನರು ಹಸುಗಳನ್ನು ಸಾಕುವುದ ಮೂಲಕ ಹೈನುಗಾರಿಕೆಯನ್ನು ಕುಲ ಕಸುಬಾಗಿ ಮಾಡಿಕೊಂಡಿದ್ದು, ಸರಕಾರದ  ವತಿಯಿಂದ ಹೈನುಗಾರಿಕೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳಒಕ್ಕೂಟ ನಿ. ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ನಿಮಿತ್ಯ ಏ.25 (ಶನಿವಾರ) ನಗರದ ಮಹಾಂತೇಶ ನಗರದ ಸ್ಪೇಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ 9ನೇ ಸುತ್ತಿನ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮಕ್ಕೆ ಗೋವುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 70 ರಿಂದ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸರಕಾರದ ವತಿಯಿಂದ ಹೈನುಗಾರಿಕೆಗೆ ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ದಿನಕ್ಕೆ 1 ಕೋಟಿ ಲೀಟರಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಬಡವರಿಗೆ ಹಸು ಖರೀದಿಸಲು ಶಕ್ತಿ ಇಲ್ಲದ ಕಾರಣ ಅವರಿಗೆ ಈ ಬಾರಿಯ ಬಜೆಟ್‌’ನಲ್ಲಿ ಶೇ. 25 ರಷ್ಟು ಸಬ್ಸಿಡಿ ನೀಡಲಾಗಿದ್ದು, ಬೆಳಗಾವಿ ಮತ್ತು ಗುಲ್ಬರ್ಗಾ ಜಿಲ್ಲೆಗೆ ಸುಮಾರು 20 ಸಾವಿರ ಹಸುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದರು. ಪಶು ವೈದ್ಯಕೀಯ ಇಲಾಖೆಯು ಬಹಳ ವಿಸ್ತಾರವಾದ ಇಲಾಖೆ, ಹಾಲು ಉತ್ಪಾದನೆಯಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದೆ. ಎಲ್ಲ ಕೆಲಸಗಾರರಿಗೆ ಉತ್ತಮ ತರಬೇತಿಯನ್ನು ನೀಡಿ ಒಂದು ತಿಂಗಳಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸುತ್ತೇವೆ ಎಂದು ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದರು.ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ ಸರ್ಕಾರ ವಿಶೇಷವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ರಾಜ್ಯದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚುರುವುದರಿಂದ ಅವುಗಳ ಸುರಕ್ಷಿತ ವ್ಯವಸ್ಥೆಗಾಗಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು. ಎಲ್ಲ ಗ್ರಾಮ, ತಾಲೂಕು ಹಾಗೂ ಜಿಲ್ಲೆಗಳಲ್ಲಿ ಲಸಿಕಾ ಕಾರ್ಯಕ್ರಮವು ಪೂರ್ಣಗೊಳ್ಳಬೇಕು.  ಪ್ರತಿಯೊಂದು  ಜಾನುವಾರು ಕುಟುಂಬಗಳಿಗೆ ಇದರ ಸದುಪಯೋಗ ದೊರೆಯಬೇಕು ಎಂದು ಹೇಳಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ  ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ ಪಶು ಸಂಗೋಪನಾ ಇಲಾಖೆಯು ಮಹಿಳೆಯರಿಗೆ ಅತೀ ಸಮೀಪವಾಗಿದೆ.  ದನಕರುಗಳ ಆರೋಗ್ಯವನ್ನು ಅವುಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸರ್ಕಾರದ ಕೆಲಸ ಎಂದು ಹೇಳಿದರು.ಸರ್ಕಾರದ ಯೋಜನೆಗಳು ಕೇವಲ ಯೋಜನೆಗಳಾಗದೇ ಅವುಗಳು ಎಲ್ಲಾ ಜನರ ಮನೆ ಬಾಗಿಲಿಗೆ ತಲುಪುವಂತಹ ಯೋಜನೆಗಳಾಗಬೇಕು.  ಸರ್ಕಾರದ ಕೆಲಸ ದೇವರ ಕೆಲಸವಾಗಿದೆ ಗ್ರಾಮೀಣ ಭಾಗದ ಸಾಕಷ್ಟು ಜನ ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಎಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆ ನೀಡುವ ಕಾರ್ಯ ಪಶು ಸಂಗೋಪನೆ ಇಲಾಖೆಯಿಂದಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ(ವಿಧಾನಸಭೆ) ಶಾಸಕ ಆಸೀಫ್ (ರಾಜು )ಸೇಠ್, ನಾವೆಲ್ಲರೂ ಪಶುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಾಣಿಕೆಯನ್ನು ಮಾಡಬೇಕು.

ಅವುಗಳ ಪೋಷಣೆ ವ್ಯವಸ್ಥಿತವಾಗಿ ಮಾಡಬೇಕು ಆತ್ಮ ವಿಶ್ವಾಸ ಇದ್ದರೆ ಎಲ್ಲವೂ ಸಾಧ್ಯ ಎಂದು ಅವರು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಶಿಲ್ಪಾ ನಾಗ್ ಅವರು ರಾಜ್ಯದ ಮೊಟ್ಟ ಮೊದಲಿಗೆ ಎಲ್ಲ ಕಡೆಯೂ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ ಉದ್ಘಾಟನೆ ಯಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಪ್ರತಿಯೊಂದು ಕುಟುಂಬಗಳ ಮನೆಯ ಬಾಗಿಲಿಗೆ ಈ ಎಲ್ಲ ಯೋಜನೆಯು ತಲುಪಬೇಕು ಎಂದು ಅವರು ತಿಳಿಸಿದರು.ಶಾಸಕರಾದ ಗಣೇಶ ಹುಕ್ಕೇರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಹಾನಗರ ಪಾಲಿಕೆ ಉಪಮಹಾಪೌರ ಹನುಮಂತ ಕೊಂಗಾಲಿ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಯಲಗೋಡ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ. ಪಿ. ಶ್ರೀನಿವಾಸು, ಅಪರ ನಿರ್ದೇಶಕ ಡಾ. ಶಿವರುದ್ರ​‍್ಪ, ಕೆ. ಎಲ್‌. ಅಪರ ನಿರ್ದೇಶಕ ಡಾ. ಪ್ರಸಾದ ಮೂರ್ತಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ,  ಜಂಟಿ ನಿರ್ದೇಶಕ ಡಾ. ಹೆಚ್‌. ನಾಗರಾಜ್,  ಬೆಳಗಾವಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ ವಿ. ಎನ್,  ಅಧಿಕಾರಿಗಳು ಉಪಸ್ಥಿತರಿದ್ದರು.