ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದರಿಂದ ಅಭಿಮಾನಿಗಳಿಂದ ಭಾರೀ ವಿರೋಧ

ನವದೆಹಲಿ, 22 ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಭಾರತ ಟಿ-20 ತಂಡದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಶಿ ತರೂರ್ ಸೇರಿದಂತೆ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗಿದೆ. ಗುರುವಾರ ರಾತ್ರಿ ಮುಂದಿನ ತಿಂಗಳಲ್ಲಿ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗಳಿಗೆ ಭಾರತ ತಂಡವನ್ನು ಎಸ್.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ. 15 ತಂಡದ ಸದಸ್ಯರಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡಿಲ್ಲ. ಆದರೆ, ಬಾಂಗ್ಲಾದೇಶ ವಿರುದ್ಧ ಕಳೆದ ಟಿ-20 ಸರಣಿಗೆ ಸಂಜು ಸ್ಯಾಮ್ಸನ್ ಆಯ್ಕೆ ಮಾಡಲಾಗಿತ್ತು. ಅವರಿಗೆ ಅಂತಿಮ 11 ರಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದೀಗ, ವಿಂಡೀಸ್ ವಿರುದ್ಧದ ಚುಟುಕು ತಂಡದಲ್ಲಿ ಅವರನ್ನು ಪರಿಗಣಿಸಿಲ್ಲ. ಸಂಜು ಸ್ಯಾಮ್ಸನ್ ಹಾಗೂ ದಿನೇಶ್ ಕಾತರ್ಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಬಿಸಿಸಿಐ ವಿರುದ್ಧ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.  "ಪ್ರಸ್ತುತ ತಂಡದಲ್ಲಿರುವ ರಿಷಭ್ ಪಂತ್ಗೆ 8 ರಿಂದ 10 ಬಾರಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲಿ ವಿಫಲರಾದರೂ ಅವಕಾಶ ನೀಡಲಾಗುತ್ತಿದೆ. ಹಾಗಾಗಿ, ಸಂಜು ಸ್ಯಾಮ್ಸನ್ ಅಂತಿಮ 11 ರಲ್ಲಿ ಆಡಲು ಅರ್ಹರಿದ್ದಾರೆ. ಆದರೆ, ಅವರನ್ನು ಪರಿಣಿಸಿಲ್ಲ. ಇದರಿಂದಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿಯನ್ನು ಬಹಿಷ್ಕರಿಸುತ್ತೇನೆ" ಎಂದು ಅಭಿಮಾನಿಯೊಬ್ಬ ಬಿಸಿಸಿಐ ವಿರುದ್ಧ ಟ್ವೀಟ್ ಮಾಡಿದ್ದಾನೆ. "ಸಂಜು ಸ್ಯಾಮ್ಸನ್ ಏಕೆ ತಂಡದಲ್ಲಿ ಇಲ್ಲ!?, ಅವರಿಗೂ ಒಂದೂ ಅವಕಾಶ ಏಕೆ ನೀಡಲಿಲ್ಲ!?, ಹಲವು ಬಾರಿ ಪಂತ್ ವೈಫಲ್ಯ ಅನುಭವಿಸಿದರೂ ಅವರಿಗೆ ಹೆಚ್ಚು ಅವಕಾಶ ನೀಡುತ್ತಿರುವುದು ಏಕೆ!?, ಇದರಲ್ಲಿ ಯಾವ ರೀತಿಯ ಭೇದಬಾವ ಮಾಡುತ್ತಿದ್ದೀರಿ.!? ಪಾರದರ್ಶಕತೆ ಎಲ್ಲಿ!? ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. "ಸಂಜು ಸ್ಯಾಮ್ಸನ್ ಅವರನ್ನು ತಂಡದಲ್ಲಿ ಅವಕಾಶ ನೀಡದೆ ಇರುವುದು ತುಂಬಾ ನೋವು ತಂದಿದೆ." ಎಂದು ಮತ್ತೊಬ್ಬ ಟ್ವೀಟ್ ಮಾಡಿದ್ದಾರೆ. "ಕೇರಳ ಯುವ ಆಟಗಾರನಿಗೆ ಆಡಲು ಅವಕಾಶ ನೀಡದೆ, ಕೈ ಬಿಡುವ ಮೂಲಕ ಅನ್ಯಾಯ ಮಾಡಲಾಗಿದೆ." ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ. ಶಶಿ ತರೂರ್ ವಿರೋಧ:  ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಒಂದೂ ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಮೂರು ಪಂದ್ಯಗಳಲ್ಲಿ ಆಟಗಾರರಿಗೆ ನೀರು ನೀಡುತ್ತಿದ್ದರು. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ಆಯ್ಕೆ ಮಾಡದೆ ಇರುವುದು ತುಂಬಾ ಬೇಸರ ತಂದಿದೆ. ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಅಥವಾ ಅವರ ಹೃದಯವನ್ನು ಪರೀಕ್ಷೆ ಮಾಡಲಾಗಿದೆಯೇ? ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಸಿಸಿಐ ವಿರುದ್ಧ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಡಿ. 6 ರಿಂದ ಆರಂಭವಾಗಲಿದೆ.