ಬಾಪುಗೌಡ ಎಂ ಡಿ ಆರ್ ಟಿ ಬಡ್ತಿ ಪಡೆದ ಮಹೇಶ್ ಅವರಿಂದ ಸನ್ಮಾನ

Honored by Mahesh who was promoted to Bapu Gowda MDRT

 ಬಾಪುಗೌಡ  ಎಂ ಡಿ ಆರ್ ಟಿ ಬಡ್ತಿ ಪಡೆದ ಮಹೇಶ್ ಅವರಿಂದ ಸನ್ಮಾನ  

ಮಹಾಲಿಂಗಪುರ  24: ಕೆಲ ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹತ್ತು, ಇಪ್ಪತ್ತು ಸಾವಿರ ಕೋಟಿಗಳಷ್ಟು ಸಾವರಿನ್ ಗ್ಯಾರಂಟಿಯ ಕಡಿಮೆ ಬಡ್ಡಿ ದರದ ಹಣದ ನೆರವು ನೀಡಿ ಎಲ್ ಆಯ್ ಸಿ ದೇಶದ ಆರ್ಥಿಕ ರಂಗಕ್ಕೆ ಚೇತೋಹಾರಿಯಾಗಿ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಕಾರಣಿಭೂತರು ಸಂಸ್ಥೆಯ ವಿಮಾ ಪಾಲಿಸಿದಾರರು ಮತ್ತು ವಿಮಾ ಪ್ರತಿನಿಧಿಗಳು ಎಂದು ಜಮಖಂಡಿ ವಿಭಾಗ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಬಾಪುಗೌಡ ಹೆಮ್ಮೆಯಿಂದ ಹೇಳಿದರು. 

 ಎಂ ಡಿ ಆರ್ ಟಿ (ಮಿಲಿಯನ್ ಡಾಲರ್ ರೌಂಡ್ ಟೇಬಲ್) ಆಗಿ ಬಡ್ತಿ ಪಡೆದ ಜೀವ ವಿಮಾ ನಿಗಮದ ಮಹೇಶ್ ಆರಿ ಅವರಿಂದ ಮನೆ ಆವರಣದಲ್ಲಿ ಹಿರಿಯ ಜೀವ ವಿಮೆ ಅಧಿಕಾರಿಗಳಿಗೆ, ಪ್ರತಿನಿಧಿಗಳಿಗೆ ಮತ್ತು ಪಾಲಿಸಿದಾರರಿಗೆ ಅಭಿನಂದನ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.  

ಈ ಸಮಯ ಮಾತನಾಡಿದ ಬಾಪುಗೌಡರು, ಜೀವ ವಿಮೆಯು ಪಾಲಿಸಿದಾರರಿಗೆ ವಿಶ್ವಾಸಿ ಸಂಸ್ಥೆಯಾಗಿ ರಾಷ್ಟ್ರಾದ್ಯಂತ ಕೆಲಸ ಮಾಡುತ್ತಿದ್ದು, ಆಪತ್ಕಾಲದಲ್ಲಿ ಸರಿಯಾಗಿ ಹಣ ಒದಗಿಸಿ ದೇಶದ ನಾಗರಿಕರಿಗೆ ಆರ್ಥಿಕ ರಕ್ಷಣೆ ನೀಡುತ್ತಿದೆ.ಇದೂ ಅಲ್ಲದೆ ರಸ್ತೆ, ಡ್ಯಾಂ, ವಿದ್ಯುತ್ ಇನ್ನೂ ಅನೇಕ ವಿಧಗಳಲ್ಲಿ ರಾಷ್ಟ್ರ ನಿರ್ಮಾಣದಂತ ಅನೇಕ ಮಹತ್ವದ ಕಾರ್ಯಗಳಲ್ಲಿ ತೊಡಗಿಸಿಕ್ಕೊಂಡಿದೆ.ದೇಶದಲ್ಲಿ ಇಷ್ಟೆಲ್ಲಾ ಕಾರ್ಯಕ್ರಮಗಳು ನಡೆದಿರಬೇಕಾದರೆ, ಹಗಲಿರುಳು ಸಂಸ್ಥೆಯ ಶ್ರೇಯಸ್ಸಿಗಾಗಿ ದುಡಿಯುತ್ತಿರುವ ಜೀವವಿಮಾ ಪ್ರತಿನಿಧಿಗಳೇ ಕಾರಣ ಎಂದು ವಿಮಾ ಪ್ರತಿನಿಧಿಗಳ ಕಾರ್ಯವನ್ನು ಶ್ಲಾಘಿಸಿ ಎಂ ಡಿ ಆರ್ ಟಿ ಆರಿ ಅವರು ಇನ್ನೂ ಹೆಚ್ಚಿನ ಸಾಧನೆಗೈಯಲಿ ಎಂದರು. 

ನಂತರ ರಬಕವಿ/ ಬನಹಟ್ಟಿ ಸಂಪರ್ಕ ಶಾಖೆಯ ಶಾಖಾಧಿಕಾರಿ ಶಿವಪ್ರಸಾದ್ ಮಾತನಾಡಿ, ಇವರಲ್ಲಿ ಪ್ರತಿನಿಧಿ ಮಹೇಶ್ ಆರಿ ಎರಡು ದಶಕಗಳಿಂದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸುತ್ತಮುತ್ತಲಿನ ಸಾವಿರಾರು ಜನರಿಗೆ ಆರ್ಥಿಕ ಆಸರೆ ನೀಡಿ, ರಬಕವಿ/ ಬನಹಟ್ಟಿ, ಮತ್ತು ಜಮಖಂಡಿ ಶಾಖೆಗಳಲ್ಲಿ ಮೊದಲ ಎಂ ಡಿ ಆರ್ ಟಿ ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಪ್ರತಿ ವರ್ಷ ಅಮೇರಿಕಾದಲ್ಲಿ ಜರುಗುವ ವಿಶ್ವ ವಿಮೆ ಸಂಸ್ಥೆಗಳ ಮಹಾ ಸಮ್ಮೇಳನದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಲಿದ್ದಾರೆ ಇದು ನಮ್ಮೇಲ್ಲರ ಹೆಮ್ಮೆ ಹಾಗೂ ಇವರು ಉತ್ತರೋತ್ತರವಾಗಿ ಬೆಳೆದು ಜೀವ ವಿಮೆಯ ಖ್ಯಾತಿಯನ್ನು ಹೆಚ್ಚಿಸಲಿ ಎಂದರು. 

ನಿವೃತ್ತ ಹಿರಿಯ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಎಂ ಜಮಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವ್ಯಕ್ತಿಗೆ ಸಾಧನೆ ಬೆನ್ನು ಹತ್ತಿ ಬರಬೇಕಾದರೆ ಆತ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಅಲ್ಲದೆ ಸಮಾಜದ ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಕೂಡ ಹೊಂದಿರಬೇಕು. ಆ ಕೆಲಸವನ್ನು ಕನಿಷ್ಠ 20 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಾ ಮಹೇಶ ಆರಿ ಅವರು ಉನ್ನತ ಎಂ ಡಿ ಆರ್ ಟಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. 

ಹಿರಿಯ ಪತ್ರಕರ್ತರಾದ ಜಯರಾಮ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಒಂದು ಕಾಲವಿತ್ತು, ಜನ ಎಲ್ ಆಯ್ ಪ್ರತಿನಿಧಿಗಳನ್ನ ನೋಡಿದರೆ ಓಡುತ್ತಿದ್ದರು, ಬಚ್ಚಿಟ್ಟುಕ್ಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿ ಜೀವವಿಮೆಯಿಂದ ಬದುಕಿಗೆ ಸಿಗುವ ಆಸರೆ ಜನತೆಗೆ ಮನವರಿಕೆಯಾಗಿ ಅದರ ಮೇಲೆ ವಿಶ್ವಾಸ ಬಂದಿದೆ. ಆದ್ದರಿಂದ ವಿಮೆದಾರರು ಪ್ರಿಮಿಯಂ ಹಣ ಕಟ್ಟಲು ವಿಮೆ ಕಚೇರಿಗಳಲ್ಲಿ ಸರದಿ ಸಾಲುಗಳಲ್ಲಿ ನಿಂತಿದ್ದಾರೆ.ಇದಕ್ಕೆಲ್ಲ ಮಹೇಶ್ ಆರಿ ಅಂತಹವರ ಪರಿಶ್ರಮವೇ ಕಾರಣವಾಗಿದೆ ಎಂದರು. 

ವೇದಿಕೆ ಗಣ್ಯರು ಸಸಿಗೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ಸಮಯದಲ್ಲಿ ಹಿರಿಯರಿಗೆ ಸನ್ಮಾನ ಮತ್ತು ನೆನಪಿನ ಕೊಡುಗೆಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ, ಜಮಖಂಡಿ ವಿಭಾಗ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಬಾಪುಗೌಡ, ನಿವೃತ್ತ ಹಿರಿಯ ಅಭಿವೃದ್ಧಿ ಅಧಿಕಾರಿ ಎಸ್ ಎಂ ಜಮಖಂಡಿ, ಕಾರ್ಯ ನಿರತ ಪತ್ರಕರ್ತರಾದ ಸಂಘದ ಅಧ್ಯಕ್ಷ ಮಹೇಶ್ ಮಣ್ಣಯ್ಯನವರಮಠ, ಕಾನಿಪ ಸಂಘದ ಕಾರ್ಯದರ್ಶಿ ಹನಮಂತ ನಾವಿ, ಮೀರಾ ತಟಗಾರ, ಹಾಸಿಂ ಪೆಂಡಾರಿ, ಶಶಿ ನಕಾತಿ, ಕೃಷ್ಣಾ ನ್ಯಾಮಗೌಡ, ಸ್ವಪ್ನಿಲ್ ಮೇಗನ್ನವರ, ಸಚಿನ್, ಶಿವಾನಂದ, ಮಾನಾಜಿ ಕಲಾಲ, ಮನು ಕರಡಿ, ಅರ್ಜುನ್ ಮೇಟಿ ಮುಂತಾದವರಿದ್ದು, ಎಂಡಿಆರ್ಟಿ ಗೌರವ ಪಡೆದ ಮಹೇಶ್ ಆರಿ ಸ್ವಾಗತಿಸಿ, ಪತ್ರಕರ್ತರಾದ ಲಕ್ಷ್ಮಣ ಕಿಶೋರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.