ಫೈಬರ್ ಹಲಗೆಗೆ ಹೆಚ್ಚಿನ ಡಿಮ್ಯಾಂಡ್‌ಽ ಮಾರುಕಟ್ಟೆಯಲ್ಲಿ ಹಲಗೆ ಮಾರಾಟ ಜೋರುಽ ಕಟ್ಟಿಗೆ, ಕುಳ್ಳು ಸಂಗ್ರಹಽಸಿ ಮಹಾದೇವ ಅರಕೇರಿ
ಹಾರೂಗೇರಿ : ಹೋಳಿ ಹಬ್ಬ ಬಂತೆಂದರೆ ಸಾಕು ಪಟ್ಟಣ ಸೇರಿದಂತೆ ಹಳ್ಳಿಗಳ ಬೀದಿಗಳಲ್ಲಿ ಹಲಗೆ ಸದ್ದು ರಿಂಗಣಿಸುತ್ತದೆ. ಹಬ್ಬದ ಸಂಭ್ರಮ ಇಮ್ಮಡಿಸುವ ಹಲಗೆಗಳ ಮಾರಾಟ ಶುರುವಾಗಿದೆ. ಮಾರುಕಟ್ಟೆಯಲ್ಲಿ ಮಕ್ಕಳು ಹಾಗೂ ಯುವಕರು ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದಾರೆ. ಹೋಳಿ ಆಚರಣೆಗೆ ಕೇವಲ ಮೂರಾ್ನಲ್ಕು ದಿನಗಳು ಬಾಕಿ ಇರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಲಗೆಗಳ ಸದ್ದು ಮಾರ್ದನಿಸುತ್ತಿದ್ದು, ಪ್ಲಾಸ್ಟಿಕ್, ಫೈಬರ್ ಹಲಗೆಗಳ ಮಾರಾಟ ಎಲ್ಲೆಡೆ ಜೋರಾಗಿದೆ.
ರಂಗು ರಂಗಿನಾಟದ ಹೋಳಿ ಹುಣ್ಣಿಮೆಯ ಪ್ರಮುಖ ಆಕರ್ಷಣೆಯೇ ಹಲಗೆ. ಹೋಳಿ ಒಂದು ವಾರದ ಮುಂಚಯೇ ಯುವಕರು, ಮಕ್ಕಳು ಹಲಗೆ ಬಾರಿಸಲು ಪ್ರಾರಂಭಿಸಿದ್ದು, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲೂ ಹಲಗೆ ಬಾರಿಸಿ ಖುಷಿ ಪಡುತ್ತಾರೆ. ಹತ್ತಾರು ಯುವಕರು, ಮಕ್ಕಳು ವೃತ್ತಾಕಾರದಲ್ಲಿ ನಿಂತು ಹಲಗೆ ಬಾರಿಸಲು ಆರಂಭಿಸಿದರೆ ನಾದಕ್ಕೆ ತಕ್ಕಂತೆ ಯುವಕರು ಮಕ್ಕಳು ನೃತ್ಯದ ಮೋಜು ಮಾಡುತ್ತಿದ್ದಾರೆ.
ವರ್ಷಕ್ಕೊಮ್ಮೆ ಬರುವ ಹೋಳಿ ಹಬ್ಬಕ್ಕಾಗಿ ಕಾತರದಿಂದ ಕಾಯುವ ಯುವ ಸಮೂಹ, ಚಿನ್ನರ ತಂಡ ಇದೀಗ ಹೋಳಿಗೆ ಅಂತಿಮ ಸಿದ್ಧತೆ ನಡೆಸಿದೆ. ಕಾಮದಹನಕ್ಕೆ ಬೀದಿ ಬೀದಿ ಸುತ್ತಿ ಕಟ್ಟಿಗೆ, ಕುಳ್ಳು ಸಂಗ್ರಹಿಸುತ್ತ ಹೋಳಿ ಹಬ್ಬಕ್ಕೆ ತಯಾರಿ ನಡೆಸಿದ್ದಾರೆ. ಶಾಲೆ ಮುಗಿಸಿ ಬರುವ ಚಿಕ್ಕಮಕ್ಕಳು ಗುಂಪು ಕಟ್ಟಿಕೊಂಡು ಓಣಿಗಳಲ್ಲಿ ಹಲಗೆ ಬಾರಿಸುತ್ತ ಖುಷಿಯಿಂದ ಸಂಚರಿಸುತ್ತಿದ್ದಾರೆ.
ಪೈಬರ್ ಹಲಗೆಗೆ ಬಾರೀ ಬೇಡಿಕೆ : ಆಧುನಿಕತೆಯ ಸ್ಪರ್ಶ ಹೋಳಿ ಹಬ್ಬವನ್ನೂ ಬಿಟ್ಟಿಲ್ಲ. ಅನಾದಿ ಕಾಲದ ಚರ್ಮದ ಹಲಗೆಗಳ ಬೆಲೆ ಕೊಂಚ ದುಬಾರಿಯಾಗಿರುವುದರಿಂದ ಅವುಗಳ ಬೇಡಿಕೆ ಮತ್ತು ಬಳಕೆ ಕಡಿಮೆಯಾಗಿ ಫೈಬರ್ ಹಲಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚರ್ಮದ ಹಲಗೆ ತಯಾರಿಸುವ ಕುಂಟುಂಬಗಳು ಸಹ ಈಗ ಕಡಿಮೆಯಾಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಗೆ ಫೈಬರ್ ಹಲಗೆಗಳು ಲಗ್ಗೆ ಇಟ್ಟಿರುವುದರಿಂದ ಚರ್ಮದ ಹಲಗೆಗಳು ಕಾಣಸಿಗುತ್ತಿಲ್ಲ. ಹಲಗೆ ಶಬ್ದ ಹೊರಡಿಸುವ ನಾದ ಆಧರಿಸಿ ಜನ ಖರೀದಿಗೆ ಮುಂದಾಗುತ್ತಿದ್ದಾರೆ. ಜೋರಾಗಿ ಶಬ್ದ ಮಾಡುವ ಹಲಗೆಗೆ ಬೇಡಿಕೆ ಹೆಚ್ಚಾಗಿದೆ.
ಗಾತ್ರಕ್ಕೆ ತಕ್ಕ ದರ ನಿಗದಿ : ಚರ್ಮದ ಹಲಗೆ ದುಬಾರಿಯಾಗಿರುವುದರಿಂದ ಇದೀಗ ಫೈಬರ್ ಹಲಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಫೈಬರ್ ಹಲಗೆ ಬೆಲೆ ಸಣ್ಣ ಗಾತ್ರದ 30ರೂ, 50ರೂ, 100ರೂ. ದಿಂದ ಸಾವಿರದವರೆಗೆ ದೊರೆಯುತ್ತಿವೆ. ಹಲಗೆ ಖರೀದಿಗೆ ಚಿನ್ನರ ತಂಡವೂ ಸೇರಿದಂತೆ ಯುವ ಸಮೂಹ ಮುಂದಾಗಿದೆ. ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ, ಶ್ರೀ ಹನುಮಾನ ದೇವಸ್ಥಾನ ಸೇರಿದಂತೆ ಮೊದಲಾದೆಡೆ ಹಲಗೆ ಮಾರಾಟ ಜೋರಾಗಿ ನಡೆಯುತ್ತಿದೆ.
(ಕಳೆದ ಒಂದು ವಾರದಿಂದ ವಿವಿಧ ಬಗೆಯ ವಿನ್ಯಾಸದ ಹಲಗೆಗಳು ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಗ್ರಾಹಕರು 20ರೂ, 30ರೂ, 50ರೂ, 100ರೂ. ಯಿಂದ ಸಾವಿರ ಬೆಲೆಯ ಹಲಗೆಗಳನ್ನು ಖರೀದಿಸುತ್ತಿದ್ದಾರೆ. - ಶಿವಾನಂದ ತೆಗ್ಗಿ. ಹಲಗೆ ವ್ಯಾಪಾರಿ.)
( ಹೋಳಿ ಹುಣ್ಣಿಮೆ ಎನ್ನುವುದೇ ಮಕ್ಕಳ ಮೋಜು ಮಸ್ತಿಯ ಹಬ್ಬ. ಅದನ್ನು ಸಂಭ್ರಮದಿಂದ ಆಚರಣೆ ಮಾಡಬೇಕೆಂದರೆ ಹಲಗೆ ನಾದ ಬೇಕು. ಮಕ್ಕಳಿಗೆ ಇಷ್ಟವಾಗುವ ಬಣ್ಣ ಸಿಂಪಡಿಸುವ ಪಿಚಕಾರಿ, ಆಕರ್ಷಕ ಬಣ್ಣದ ಹಲಗೆಯನ್ನು ಖರೀದಿ ಮಾಡಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತೇವೆ. - ಸಿದರಾಯ ಕಾಂಬಳೆ. ವಿಶ್ರಾಂತ ಮುಖ್ಯಾಧ್ಯಾಪಕರು.)
ಫೋಟೋ ಶಿರ್ಷಿಕೆ : 10ಹಾರೂಗೇರಿ ಸುದ್ದಿ-1 - ಹಾರೂಗೇರಿ ಪಟ್ಟಣದಲ್ಲಿ ಹೋಳಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲು ಮಾರುಕಟ್ಟೆಯಲ್ಲಿ ಹಲಗೆಗಳ ಖರೀದಿ ಮತ್ತು ಮಾರಾಟ ಜೋರಾಗಿದೆ.