ಮನೆ ಹೊರಗಿನ ನೀರು ಸಂಗ್ರಹಕಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಈಡಿಸ್ ಸೊಳ್ಳೆಗಳು ಮೊಟ್ಟೆ ಇಡದಂತೆ ಸಹಕರಿಸಿ: ಡಾ ಅಬ್ದುಲ್ಲಾ

Help prevent Aedes mosquitoes from laying eggs by properly covering outdoor water reservoirs: Dr Ab

ಮನೆ ಹೊರಗಿನ ನೀರು ಸಂಗ್ರಹಕಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಈಡಿಸ್ ಸೊಳ್ಳೆಗಳು ಮೊಟ್ಟೆ ಇಡದಂತೆ ಸಹಕರಿಸಿ: ಡಾ ಅಬ್ದುಲ್ಲಾ  

ಬಳ್ಳಾರಿ 17: ಡೆಂಗ್ಯು ರೋಗ ಹರಡುವ ಈಡಿಸ್ ಸೊಳ್ಳೆಗಳ ಸಂತತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಮನೆಯ ಸುತ್ತಲೂ ನೀರು ನಿಲ್ಲದಂತೆ ಸ್ವಚ್ಚವಾಗಿಡುವ ಮೂಲಕ ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಾರ್ವಜನಿಕರು ಸಹಕರಿಸಿ ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಜನತೆಗೆ ಮನವಿ ಮಾಡಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದ ಸಹಕಾರದಲ್ಲಿ ಲಾರ್ವಾ ಸಮೀಕ್ಷಾ ಕಾರ್ಯದ ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಗಾಂಧಿನಗರ ಬಡಾವಣೆ ವ್ಯಾಪ್ತಿಯ ಬಿ.ಚಿ.ನಗರದಲ್ಲಿ ಮನೆ ಮನೆ ಭೇಟಿಯ ಸಮೀಕ್ಷಾ ಕಾರ್ಯ ಪರೀಶೀಲಿಸಿ ಅವರು ಮಾತನಾಡಿದರು. 

ಡೆಂಗ್ಯು ಪ್ರಕರಣಗಳು ಗಣನೀಯವಾಗಿ ನಿಯಂತ್ರಣ ವಾಗಿದ್ದು, ವಿಶೇಷವಾಗಿ ನೀರು ಸಂಗ್ರಹಕಗಳಾದ ಡ್ರಮ್ ಬ್ಯಾರಲ್, ಕಲ್ಲಿನ ಡೋಣಿ, ಸಿಮೆಂಟ್ ತೊಟ್ಟಿ ಮುಂತಾದವುಗಳನ್ನು ವಾರದಲ್ಲಿ ಒಮ್ಮೆ ಚೆನ್ನಾಗಿ ತಿಕ್ಕಿ ತೊಳೆದು ನೀರು ತುಂಬುವುದಕ್ಕೆ ಆದ್ಯತೆ ನೀಡಬೇಕು, ಸ್ವಚ್ಚಗೊಳಿಸಲು ಸಾಧ್ಯವಿಲ್ಲದ ಪರಿಕರಗಳಿಗೆ ಟೆಮಿಫಾಸ್ ದ್ರಾವಣವನ್ನು ಹಾಕಲು ಸಹಕರಿಸಬೇಕು ಎಂದು ವಿನಂತಿಸಿದರು. 

ಡೆಂಗ್ಯೂ ಖಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದರಿರುವುದರಿಂದ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮುಂತಾದವು ಕಂಡು ಬಂದರೆ ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಕೋರಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎನ್ ವಿಬಿಡಿಸಿಪಿ ಜಿಲ್ಲಾ ಸಲಹೆಗಾರ ಪ್ರತಾಪ್, ಆಶಾ ಕಾರ್ಯಕರ್ತೆ ವಿಜಯಭಾರತಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.