ಕೂಡ್ಲಿಗಿಯ ಮೃತ ಬಾಣಂತಿ ಮನೆಗೆ ಆರೋಗ್ಯ ಸಚಿವರ ಭೇಟಿ
ವಿಜಯನಗರ (ಹೊಸಪೇಟೆ) 08: ಬಾಣಂತಿಯರ ಸರಣಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮೃತ ಬಾಣಂತಿ ಸುಮಯಾ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಂತೈಸಿದರು.
ಕೂಡ್ಲಿಗಿ ಪಟ್ಟಣದ ಆಜಾದ್ ನಗರದಲ್ಲಿರೋ ಮೃತ ಬಾಣಂತಿ ಸುಮಯಾ ಮನೆಗೆ ಆಗಮಿಸಿದ ಸಚಿವರು ದುರ್ದೈವಾಶತ್ ಬಾಣಂತಿ ಸುಮಯಾ ಮೃತಪಟ್ಟಿರುವುದು ಕುಟುಂಬದವರಿಗೆ ನೋವುಂಟು ಆಗಿದೆ. ಮಗು ಮತ್ತು ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಮ್ಮಿಂದಾಗಬೇಕಿದೆ. ಕುಟುಂಬಕ್ಕೆ ಅಗತ್ಯ ಸಹಾಯ ಕಲ್ಪಿಸಲಾಗುವುದು. ಪರಿಹಾರ ಧನ ನೀಡುವ ಬಗ್ಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ. ಆಸ್ಪತ್ರೆಯಲ್ಲಿ ಸರಣಿ ಸಾವಿನ ಬಗ್ಗೆ ಮಾಹಿತಿ ನೀಡಲು ಈಗಾಗಲೇ ತಂಡ ರಚಿಸಿ ವರದಿ ನೀಡಲು ತಿಳಿಸಿದೆ. ವೈದ್ಯರ ನಿರ್ಲಕ್ಷ್ಯ ಕಂಡು ಬಂದಿಲ್ಲ. ತಪ್ಪು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಬಳಿಕ ಪ್ರವಾಸಿ ಮಂದಿರದಲ್ಲಿ ಇನ್ನೋರ್ವ ಮೃತ ಬಾಣಂತಿ ಮಹಾಲಕ್ಷ್ಮಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಇಬ್ಬರು ಮಕ್ಕಳ ಪಾಲನೆಗೆ ಕುಟುಂಬದವರಿಗೆ ನಿಗಾವಹಿಸಲು ಸೂಚಿಸಿದರು.
ಈ ವೇಳೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ಎರಡು ಕುಟುಂಬಕ್ಕೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರವಾಗಿ ನೀಡುತ್ತೇನೆ. ಇಬ್ಬರು ಮಕ್ಕಳ ಹೆಸರಿನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಪಾವತಿಸುತ್ತೇನೆ. ಈಗಾಗಲೇ ಸರ್ಕಾರದಿಂದ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ಸಿಎಂ ಅವರನ್ನು ಒತ್ತಾಯಿಸಲಾಗುವುದು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹೆಚ್ಚಿನ ಪರಿಹಾರ ನೀಡೋ ವಿಶ್ವಾಸವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ವೈಯಕ್ತಿಕ ಪರಿಹಾರ ನೀಡೋದಾಗಿ ಹೇಳಿದ್ದಾರೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಡಿಹೆಚ್‌ಒ ಶಂಕರ ನಾಯ್ಕ, ಆರ್ ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ತಹಸೀಲ್ದಾರ ರೇಣುಕಮ್ಮ ಇತರರಿದ್ದರು.