ಹಾವೇರಿ ತಾ.ಪಂ.ಸಾಮಾನ್ಯ ಸಭೆಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಿ

Haveri T.P. General Assembly Work in coordination to create a good school climate

ಹಾವೇರಿ ತಾ.ಪಂ.ಸಾಮಾನ್ಯ ಸಭೆಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಿ 

ಹಾವೇರಿ 30 : ತಾಲೂಕಿನಲ್ಲಿ ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಮನ್ವಯದಿಂದ  ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಶಾಲೆಗಳಲ್ಲಿ  ಶುದ್ಧಕುಡಿಯುವ ನೀರಿನ ಘಟಕ ಅಳವಡಿಸಲು ಚಿಂತನೆ ಮಾಡಲಾಗಿದೆ. ಈ ಕುರಿತು ಕ್ರಿಯಾಯೋಜನೆ ತಯಾರಿಸಿ  ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಅವರು ಸೂಚನೆ ನೀಡಿದರು.  

ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ  ಸೋಮವಾರ ಹಾವೇರಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ದೇವಸ್ಥಾನಕ್ಕಿಂತ ಶಾಲೆಗಳಿಗೆ ಆದ್ಯತೆ ನೀಡಬೇಕಾಗಿದೆ. ಹಾಗಾಗಿ ಶಾಲಾ ಕೊಠಡಿ, ಕಂಪೌಂಡ,  ಶೌಚಾಲಯ, ಭೋಜನಾಲಯ ಸೇರಿದಂತೆ ಶಾಲೆಗಳಿಗೆ ಮೂಲಭೂತ ಸೌಲಭ್ಯ ಅವಶ್ಯಕತೆ ಕುರಿತು ಸಂಪೂರ್ಣ ಮಾಹಿತಿ ನೀಡಿದರೆ ಆದ್ಯತೆ ಮೇರೆಗೆ  ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಅವರು ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ.  ಮಕ್ಕಳ ಕಲಿಕೆ ಹಿತದೃಷ್ಟಿಯಿಂದ  ಪ್ರಾಥಮಿಕ ಶಾಲೆಗಳಿಗೆ 122  ಹಾಗೂ ಪ್ರೌಢಶಾಲೆಗಳಿಗೆ 25 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  

ಆರೋಗ್ಯ ಕಾಳಜಿ: ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬರುವ ಬಡ ರೋಗಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು.  ನಾಯಿಕ ಕಡಿತ ಸೇರಿದಂತೆ ವಿವಿಧ ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಮಾಡಿಕೊಂಡಿರಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಸಂಭವಿಸದಂತೆ ತೀವ್ರ ನಿಗಾವಹಿಸಬೇಕು ಎಂದು  ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಮಂಜೂರಾದ ಹಾಗೂ ಖಾಲಿ ಇರುವ ವೈದ್ಯರ ಹಾಗೂ  ಸಿಬ್ಬಂದಿಗಳ ಕೊರತೆ ಮಾಹಿತಿ ನೀಡಿದರೆ  ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳ ಭರ್ತಿಗೆ ಕ್ರಮವಹಿಸಲು ಅನುಕೂಲವಾಗುತ್ತದೆ. ಕೂಡಲೇ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಪಟ್ಟಿ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಅನೀರೀಕ್ಷಿತ ಭೇಟಿ ನೀಡಿ: ವಿದ್ಯಾರ್ಥಿ ನಿಲಯಗಳಿಗೆ ತಾಲೂಕಾ ಅಧಿಕಾರಿಗಳು ಅನೀರೀಕ್ಷಿತ ಭೇಟಿ ನೀಡುವ ಮೂಲಕ ವಿದ್ಯಾರ್ಥಿ ನಿಲಯಗಳ ಸ್ವಚ್ಛತೆ, ಆಹಾರ ವಿತರಣೆ ಪರೀಶೀಲಿಸಬೇಕು. ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಬಗೆಹರಿಸಬೇಕು.  ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಜಾಗ ಇದ್ದರೆ ಕೂಡಲೇ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. 

ಆಯ್ಕೆ ಸಮಿತಿ ಬದಲಾವಣೆ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಕುರಿ ಘಟಕ  ಸ್ಥಾಪನೆ ಕುರಿತು ಫಲಾನುಭವಿಗಳ ಆಯ್ಕೆ ಕುರಿತು ಮಾಹಿತಿ ಪಡೆದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರು, ಆಯ್ಕೆ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಕೈಬಿಡಲಾಗಿದೆ. ಈ ಸಮಿತಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿ, ಈ ಕುರಿತು ಪಶು ಸಂಗೋಪನೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.ಗುತ್ತಲ ಸಮೀಪ ಇರುವ ಕುರಿ ಸಂವರ್ಧನಾ ಕೇಂದ್ರದ 296 ಎಕರೆ ಪ್ರದೇಶದ ಸದುಪಯೋಗವಾಗಬೇಕು.  ಈ ಕುರಿತು ಅಧಿಕಾರಿಗಳಿಗೆ ಇಚ್ಚಾಶಕ್ತಿ ಇರಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು  ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿದ್ಯುತ್ ಕಂಬಗಳ ಸ್ಥಳಾಂತರ: ತಾಜನಗರದ ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಕೆರೆಕೊಪ್ಪ- ಕರ್ಜಗಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ರಸ್ತೆ ಮೇಲೆ ವಾಲಿದ್ದು, ಯಾವುದೇ ಅವಘಡಗಳು ಸಂಭವಿಸುವ  ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸೋಲಾರ್ ಬಳಕೆಗೆ ಮನವೊಲಿಸಿ:  ಸೂರ್ಯ ಘರ್ ಯೋಜನೆಯಡಿ ಸೋಲಾರ್ ಅಳವಡಿಕೆಗೆ ರೈತರ ಮನವೋಲಿಸಬೇಕು. ಪ್ರಾಯೋಗಿಕವಾಗಿ ಆರಂಭಿಸಿ  ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಟ್ರಾನ್ಸ್‌ಫರ್ಮರ್  ಬೇಡಿಕೆಗೆ ತುರ್ತಾಗಿ ಸ್ಪಂದಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮರ ತೆರವಿಗೆ ಸೂಚನೆ: ಹಾಲಗಿ ಗ್ರಾಮದಲ್ಲಿ ಪಾಳು ಬಿದ್ದ ಮನೆಯಲ್ಲಿ ಬೃಹದಾಕಾರವಾಗಿ ಆಲದ ಮರ ಬಳೆದಿದ್ದು, ವಿದ್ಯುತ್  ತಂತಿಗೆ ತಗುಲಿದರೆ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಎಂದು ನಾನು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಹೋದಾಗ, ಅಲ್ಲಿಯ ಸ್ಥಳೀಯರು ನನ್ನ ಬಳಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು.  ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮಗಳ ಅಭಿವೃದ್ಧಿ,   ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕೂಡಲೇ ಆಲದಮರ ತೆರವುಗೊಳಿಸಲು ಸಂಬಂಧಿಸಿವರಿಗೆ ನೋಟೀಸ್ ನೀಡಿ, ಅವರು ತೆರವುಗೊಳಿಸದಿದ್ದರೆ ಪಂಚಾಯಿತಿಯಿಂದ ತೆರವುಗೊಳಿಸಿ, ಆ ವೆಚ್ಚವನ್ನು ಸಂಬಂಧಿಸಿದವರ  ಕರ ಶುಲ್ಕಕ್ಕೆ ಜಮೆ ಮಾಡಬೇಕು. ಈ ಕೆಲಸ 15 ದಿನಗಳಲ್ಲಿ ಆಗಬೇಕು. ತಪ್ಪಿದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ ಮಾಡಲು ಶಿಫಾರಸ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಾಲುವೆ ದುರಸ್ತಿಮಾಡಿ: ತೋಟದ ಯಲ್ಲಾಪುರ ಹತ್ತಿರ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ರೈತರ ಜಮೀನು ಹಾಳಾಗಿದೆ. ರೈತರಿಗೆ ತೊಂದರೆಯಾಗದಂತೆ ಕೂಡಲೇ ಕಾಲುವೆಗಳ ದುರಸ್ತಿಮಾಡಿಸಬೇಕು ಎಂದು ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರರಿಗೆ ಸೂಚನೆ ನೀಡಿದರು.  

ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪರೀಶೀಲನೆ ನಡೆಸಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ತಾ.ಪಂ.ಆಡಳಿತಾಧಿಕಾರಿ ಸುರೇಶ ಹುಗ್ಗಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ತಹಶೀಲ್ದಾರ ಶ್ರೀಮತಿ ಶರಣಮ್ಮ, ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರ  ಆಪ್ತ ಕಾರ್ಯದರ್ಶಿ ಶ್ರೀಧರ ಉಪಸ್ಥಿತರಿದ್ದರು.