ನಗರದ ರಾಜಕಾಲುವೆ ಹೂಳೆತ್ತುವಲ್ಲಿ ಘೋರ ನಿರ್ಲಕ್ಷ್ಯ - ಮೇ 18 ರಂದು ನಗರಸಭೆ ಮುಂದೆ ಪ್ರತಿಭಟನಾ ಧರಣಿಗೆ ನಿರ್ಧಾರ

ನಗರದ ರಾಜಕಾಲುವೆ ಹೂಳೆತ್ತುವಲ್ಲಿ ಘೋರ ನಿರ್ಲಕ್ಷ್ಯ - ಮೇ 18 ರಂದು ನಗರಸಭೆ ಮುಂದೆ ಪ್ರತಿಭಟನಾ ಧರಣಿಗೆ ನಿರ್ಧಾರ  Gross negligence in dredging the city's Rajakaluva

ಕೊಪ್ಪಳ  17: ನಗರದ ರಾಜಕಾಲುವೆ ಆಕ್ರಮಿಸಿಕೊಂಡು ಕಟ್ಟಿದ ಕಟ್ಟಡಗಳನ್ನು ತೆರೆವುಗೊಳಿಸಿ ಹೂಳೆತ್ತುವಲ್ಲಿ ನಗರಸಭೆಯ ಘೋರ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಮೇ 18 ರಂದು ಸೋಮವಾರ ’ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ನಗರಸಭೆ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.   

ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ನಗರದ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದ ಬಗ್ಗೆ ಕಳೆದ ಮೇ 4, 2026 ರ ಸೋಮವಾರದಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ,ಮುಂಗಾರು ಮಳೆ ಆರಂಭವಾಗುವ ಮುನ್ನವೇ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಆಗ್ರಹಿಸಲಾಗಿತ್ತು. ಮಳೆಗಾಲದಲ್ಲಿ ಎದುರಾಗಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದರೂ ನಗರಸಭೆ ಮತ್ತು ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿವೆ. ಈ ಮೊಂಡುತನದ ಧೋರಣೆಯನ್ನು ಖಂಡಿಸಿ ರಾಜಕಾಲುವೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾದರೆ ಅದಕ್ಕೆ ನಗರಸಭೆಯೇ ನೇರ ಹೊಣೆ ಎಂದು ಎಚ್ಚರಿಸಲಾಗಿತ್ತು. ಆದರೆ, ಹನ್ನೆರಡು ದಿನಗಳು ಕಳೆದರೂ ಅಧಿಕಾರಿಗಳು ಕಿಂಚಿತ್ತೂ ಗಮನಹರಿಸದೆ ಇರುವುದು ಸಾರ್ವಜನಿಕರ ಹಿತಾಸಕ್ತಿಯನ್ನು ಗಾಳಿಗೆ ತೂರಿದಂತಿದೆ ಎಂದು ಸಭೆಯಲ್ಲಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.       

ಸಭೆಯ ಪ್ರಮುಖ ಆಗ್ರಹಗಳು:    1) ಕೂಡಲೇ ಯುದ್ಧೋಪಾದಿಯಲ್ಲಿ ಆಕ್ರಮಿಸಿಕೊಂಡು ಕಟ್ಟಿದ ಕಟ್ಟಡಗಳನ್ನು ತೆರೆವುಗೊಳಿಸಿ ರಾಜಕಾಲುವೆಯಲ್ಲಿಯ ಮತ್ತು ನಗರದ ಎಲ್ಲಾ ಬಡಾವಣೆಗಳ ಚರಂಡಿಗಳಲ್ಲಿಯ ಗಿಡಗಂಟಿಗಳು. ಪ್ಲಾಸ್ಟಿಕ್ ತ್ಯಾಜ್ಯಗಳ ಹೂಳೆತ್ತುವ ಕಾರ್ಯ ಆರಂಭಿಸಬೇಕು.       2) ಮಳೆಗಾಲದಲ್ಲಿ ಸಾರ್ವಜನಿಕರ ಮನೆಗಳಿಗೆ ರಾಜಕಾಲುವೆ ನೀರು ನುಗ್ಗದಂತೆ ತಡೆಗೋಡೆ ಅಥವಾ ಅಗತ್ಯ ಕ್ರಮ ಕೈಗೊಳ್ಳಬೇಕು.     3) ನಗರದ ರಾಜಕಾಲುವೆ ಮತ್ತು ವಾರ್ಡುಗಳ ಚರಂಡಿಗಳ ಹೂಳು ಎತ್ತುವಲ್ಲಿ ವಿಳಂಬ ಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.    ನಗರಸಭೆಯ ನಿರ್ಲಕ್ಷ್ಯದಿಂದಾಗಿ ಮಳೆ ಬಂದಾಗ ಜನರ ಬದುಕು ಬೀದಿಗೆ ಬರುವಂತಾಗಿದೆ. ಮನವಿಗಳಿಗೆ ಬೆಲೆ ಇಲ್ಲದ ಮೇಲೆ ಬೀದಿಗಿಳಿದು ಹೋರಾಡುವುದು ಅನಿವಾರ್ಯ.ಈ ಹೋರಾಟ ಕೇವಲ ಸಾಂಕೇತಿಕವಾಗಿದ್ದು.ಇದೇ ಧೋರಣೆ ಮುಂದುವರೆದರೆ ಬೃಹತ್ ಹೋರಾಟ ಅನಿವಾರ್ಯವಾಗುತ್ತದೆ ಎಂದೂ ಸಭೆಯಲ್ಲಿ ಮುಖಂಡರು ಅಭಿಪ್ರಾಯ ಪಟ್ಟರು.    ಮುಖಂಡರು ಮಾತನಾಡಿ ದಿನಾಂಕ:18 ಮೇ 2026, ಸೋಮವಾರ ಬೆಳಿಗ್ಗೆ 11:00 ಗಂಟೆಗೆ. ನಗರಸಭೆ ಕಾರ್ಯಾಲಯದ ಮುಂದೆ ಸಾಂಕೇತಿಕ ಧರಣಿ ನಡೆಯಲಿದ್ದು.ವಿವಿಧ ಪ್ರಗತಿಪರ ಸಂಘಟನೆಗಳು.ನಗರದ ಪ್ರಜ್ಞಾವಂತ ನಾಗರಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.   

ಸಭೆಯಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್‌.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್‌. ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್‌.ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ.ದಲಿತ ಯುವ ವೇದಿಕೆಯ ಸಂಚಾಲಕ ಸುಂಕಪ್ಪ ಮೀಸಿ.ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ತುಕಾರಾಮ್ ಪಾತ್ರೋಟಿ. ದಲಿತ ಸಂಘರ್ಷ ಸಮಿತಿಯ (ದಾದಾ ಸಾಹೇಬ್ ಡಾ: ಎನ್‌. ಮೂರ್ತಿ ಸ್ಥಾಪಿತ) ರಾಜ್ಯ ಕಾರ್ಯದರ್ಶಿ ರಾಮಣ್ಣ ಕಂದಾರಿ. ರಾಜ್ಯ ಸಮಿತಿಯ ಹಿರಿಯ ಸದಸ್ಯ ಡಾ:ಬಿ.ಜ್ಞಾನ ಸುಂದರ್ ಮುಂತಾದವರು ಭಾಗವಹಿಸಿದ್ದರು.