ಮಂತ್ರಾಲಯ, ಜೂ 4,ರಾಜ್ಯದಲ್ಲಿ ಜೂನ್ ನಿಂದ ಡಿಸೆಂಬರ್ ವರೆಗೆ ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರದ ಅವಧಿ ಪೂರ್ಣಗೊಳ್ಳಲಿದ್ದು, ಅವಧಿ ಪೂರ್ಣಗೊಂಡ ಪಂಚಾಯತ್ ಗಳಿಗೆ ಅಡಳಿತ ಸಮಿತಿಗಳನ್ನು ರಚಿಸುವುದಾಗಿ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.ಮಂತ್ರಾಲಯದ ಆಂಜನೇಯ ದೇವಸ್ಥಾನದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಅವಧಿ ಮುಗಿದ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ಕುರಿತು ಒಲವು ವ್ಯಕ್ತಪಡಿಸಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿಯಿಂದ ಗೆದ್ದಿದ್ದ ನಗರ ಸಂಸ್ಥೆಗಳ ಮುಖ್ಯಸ್ಥರನ್ನು ಕೆಳಗಿಳಿಸಿ ಕಾಂಗ್ರೆಸ್ ಪಕ್ಷಕ್ಕೆಸೇರಿದವರನ್ನು ನೇಮಿಸಲಾಗಿತ್ತು. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ನೇರ ಕಾರಣರಾಗಿದ್ದರು. ಇವರು ನಮಗೆ ಬುದ್ದಿ ಹೇಳುವುದು ಬೇಡ. ನಮಗೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ಅವಧಿ ಮುಗಿದಿರುವ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕೇ, ಆಡಳಿತ ಸಮಿತಿಗಳನ್ನು ರಚಿಸಬೇಕೇ, ಇರುವ ಚುನಾಯಿತ ಸಮಿತಿಗಳನ್ನೇ ಮುಂದುವರೆಸಬೇಕೋ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಈ ತಿಂಗಳಲ್ಲಿ 2600 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳ ಅಧಿಕಾರದ ಅವಧಿ ಮುಗಿಯಲಿದ್ದು, ಜುಲೈ ನಲ್ಲಿ ಮತ್ತೆ ಎರಡು ಸಾವಿರದಷ್ಟು, ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಇನ್ನಷ್ಟು ಗ್ರಾಮ ಪಂಚಾಯತ್ ಗಳ ಅವಧಿ ಮುಕ್ತಾಯವಾಗಲಿದೆ. ಈ ವಿಚಾರದಲ್ಲಿ ಸರ್ಕಾರ ತ್ವರಿತ ಹಾಗೂ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು. ರಾಜ್ಯದ 6020 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳ ಪೈಕಿ 5800 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ ಮನ್ರೇಗಾ ಕಾಮಗಾರಿ ನಡೆಯುತ್ತಿದೆ. ಬಳ್ಳಾರಿ ಮತ್ತು ರಾಯಚೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮನ್ರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಒಂದಲ್ಲಾ ಒಂದು ಉದ್ಯೋಗ ನಡೆಯುತ್ತಿದೆ. ಕೋವಿಡ್ 19 ಸಂದರ್ಭದಲ್ಲಿ ಅತಿ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕೆಲಸ ಮಾಡಿದ ಎಲ್ಲರಿಗೂ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸಲಾಗುತ್ತಿದೆ. ಹಳೆಯ ಬಾಕಿಯನ್ನು ಉಳಿಸಿಕೊಂಡಿಲ್ಲ. ಎಲ್ಲವನ್ನೂ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಈಶ್ವರಪ್ಪ ಹೇಳಿದರು.