ಧಾರವಾಡ13:ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸ, ಸಂಶಿ, ಚಾಕಲಬ್ಬಿ, ಬರದ್ವಾಡ, ಮತ್ತಿಗಟ್ಟಿ, ರಾಮಾಪುರ, ನವಲಗುಂದ ತಾಲೂಕಿನ ಶಿರೂರ ಗ್ರಾಮ ಪಂಚಾಯಿತಿಯ ಆಹೆಟ್ಟಿ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ, ಧಾರವಾಡ ತಾಲೂಕಿನ ಕಡಬಗಟ್ಟಿ ಗ್ರಾಮಪಂಚಾಯಿತಿಯ ಹಿಂಡಸಗೇರಿ ಗ್ರಾಮದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಘೋಷಿಸಲಾಗಿದೆ. ಮುಕ್ತ , ಸುಗಮ ಹಾಗೂ ಶಾಂತಿಯುತ ಚುನಾವಣೆ ಆಯೋಜಿಸುವ ದೃಷ್ಟಿಯಿಂದ ಈ ಗ್ರಾಮಪಂಚಾಯತ್ಗಳ ವ್ಯಾಪ್ತಿಯಲ್ಲಿ ಮೇ 13 ರ ಸಂಜೆ 6 ಗಂಟೆಯಿಂದ ಮೇ 31 ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯಪಾನ, ಮದ್ಯಮಾರಾಟ, ಮದ್ಯಸಂಗ್ರಹಣೆ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಈ ದಿನಗಳನ್ನು ಶುಷ್ಕ ದಿನಗಳು ಎಂದು ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಚುನಾವಣೆ ಹಾಗೂ ಮತಗಳ ಎಣಿಕೆ ಸಮಯದಲ್ಲಿ ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬಿಯರ್ ಬಾರ್ಗಳು, ಕ್ಲಬ್ಗಳು ಹಾಗೂ ಮದ್ಯದ ಡಿಪೋಗಳನ್ನು ಮುಚ್ಚಬೇಕು. ಲೈಸೆನ್ಸ್ದಾರರಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಸಾರ್ವಜನಿಕ ಶಾಂತತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ವಲಯ ಅಬಕಾರಿ ಇನ್ಷ್ಪೆಕ್ಟರ್ಗಳು ಹಾಗೂ ಉಪವಿಭಾಗದ ಅಬಕಾರಿ ಅಧೀಕ್ಷಕರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.