ಬೆಂಗಳೂರು, ಜೂ 3, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೆರವು ನೀಡಿದ್ದು, ಅವರ ಖಾತೆಗಳಿಗೆ ಒಟ್ಟು 619 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು, 12.39 ಲಕ್ಷ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ನಗದನ್ನು ಜಮಾ ಮಾಡಲಾಗಿದೆ ಮಾಹಿತಿ ನೀಡಿದರು. ಈ ಹಣ ಪಾವತಿ ಪ್ರಕ್ರಿಯೆಯನ್ನು ನಿರ್ವಹಿಸಲು ರಾಜ್ಯದಾದ್ಯಂತ 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.ಈ ಹೇಳಿಕೆ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠ, ಸರ್ಕಾರದ ಮಾಹಿತಿಯಂತೆ ಇಲ್ಲಿಯವರೆಗೆ 12.39 ಲಕ್ಷ ಕಾರ್ಮಿಕರಿಗಷ್ಟೇ ಪರಿಹಾರ ತಲುಪಿದೆ. ಹಾಗಾದರೆ, ಉಳಿದ ಕಾರ್ಮಿಕರಿಗೆ ಪರಿಹಾರ ಯಾವಾಗ ನೀಡಲಾಗುತ್ತದೆ, ಕಟ್ಟಡ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲು ಅನುಸರಿಸುತ್ತಿರುವ ಮಾನದಂಡಗಳೇನು ಎಂಬ ಬಗ್ಗೆ ವಿವರಣೆ ನೀಡಿ ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.