ರಾಮದುರ್ಗ 15: ರಾಜ್ಯ ಹಾಗೂ ದೇಶದಾದ್ಯಂತ ಪ್ರಖ್ಯಾತಿ ಪಡೆದ ತಾಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ, ತಾಲೂಕು ಹಾಗೂ ಜಿಲ್ಲೆಯ ವಿವಿಧಡೆಯಿಂದ ಬಸ್ ಸಂಚಾರ ವ್ಯವಸ್ಥೆಯೊಂದಿಗೆ ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಸೂಚನೆ ನೀಡಿದರು.
ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಶನಿವಾರ ಡಿ.22 ರಿಂದ ನಡೆಯುವ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ, ಅರಣ್ಯ, ಅರೋಗ್ಯ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜಾತ್ರೆಗೆ ಆಗಮಿಸಿದ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯ ನಿಮರ್ಿಸಲು ಸೂಕ್ತ ಕ್ರಮ ತೆಗದುಕೊಳ್ಳಬೇಕೆಂದು ತಿಳಿಸಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಜನತೆಯ ಆಶೋತ್ತರಗಳಿಗೆ ಸ್ಪಂದನೆ ದೊರೆತು ಸರಕಾರದ ಸೌಲಭ್ಯಗಳನ್ನು ಸಕಲರಿಗೂ ತಲುಪಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತೆಯಿಂದ ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು.
ತಹಶೀಲ್ದಾರ ಆರ್.ವ್ಹಿ. ಕಟ್ಟಿ, ತಾ.ಪಂ ಇಒ ಎ. ಎಲ್. ಪಾಟೀಲ ಮಾತನಾಡಿ, ಸರ್ವ ಇಲಾಖೆಯ ಅಧಿಕಾರಿಗಳು ಹೊಂದಾಣಿಕೆಯಿಂದ ಜನತೆಗೆ ಯಾವುದೇ ತೊಂದರೆಯಾಗದಂತೆ ಪೂರ್ವ ನಿಯೋಜಿತವಾಗಿ ತಯಾರಿ ಮಾಡಿಕೊಂಡು ಜಾತ್ರೆ ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಿದರು.
ಸಿಪಿಐ ಶ್ರೀನಿವಾಸ್ ಹಾಂಡ ಮಾತನಾಡಿ, ಜಾತ್ರೆಯಲ್ಲಿ ನಡೆಯುವ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಇಲಾಖೆಯ ಕೆಲಸ ಸಿಬ್ಬಂದಿ ಸಮವಸ್ತ್ರ ರಹಿತವಾಗಿ ಕೆಲಸ ನಿರ್ವಹಿಸಲಿದ್ದಾರೆ. ರಾಮದುರ್ಗ ಡಿವೈಎಸ್ಪಿ ಸಾಹೇಬರ ಮಾರ್ಗದರ್ಶನದಲ್ಲಿ ಜಾತ್ರೆಯ ಕಾನೂನು ಸುವ್ಯವಸ್ಥೆಗೆ ಅವಶ್ಯಕ ಸಿಬ್ಬಂದಿಗಳನ್ನು ಒದಗಿಸುವಂತೆ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು. ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರಿದ್ದರು.