ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಮಗ್ರ ವರದಿ ನೀಡಿ : ಡಾ.ಕೆ.ವಿ. ರಾಜೇಂದ್ರ

Give a comprehensive report on tourism development in Uttara Kannada district: Dr. K.V. Rajendra

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಮಗ್ರ ವರದಿ ನೀಡಿ : ಡಾ.ಕೆ.ವಿ. ರಾಜೇಂದ್ರ

ಕಾರವಾರ 15: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕುರಿತಂತೆ ಪ್ರವಾಸ ಸ್ಥಳಗಳನ್ನು ಅಧ್ಯಯನ ಮಾಡಿ, ಸಮಗ್ರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸದಸ್ಯರಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಧಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಈ ಎಲ್ಲಾ ಪ್ರವಾಸಿ ತಾಣಗಳನ್ನು ಆಧ್ಯಯನ ಮಾಡಿ, ಆ ಪ್ರದೇಶದಲ್ಲಿನ ವೈಶಿಷ್ಟ್ಯತೆಗಳು ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳ ಕುರಿತು ಸಮಗ್ರವಾದ ವರದಿಯನ್ನು ಆದಷ್ಟು ಶೀಘ್ರದಲ್ಲಿ ಸಲ್ಲಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ, ಅರಣ್ಯ ಟೂರಿಸಂ, ರೈನ್ ಟೂರಿಸಂ, ರಾಕ್ ಟೂರಿಸಂ, ಹಿಲ್ ಟೂರಿಸಂ ಮಾಡಲು ಅವಕಾಶಗಳಿದ್ದು, ಪರಿಸರ ಮತ್ತು ಅರಣ್ಯ ಪ್ರದೇಶಕ್ಕೆ ಯಾವುದೇ ಹಾನಿಯಾಗದಂತೆ ಮತ್ತು ಪ್ರವಾಸಿಗರಿಗೆ ಸುರಕ್ಷಿತವಾಗಿರುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳು, ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಎದುರಿಸಬಹುದಾದ ತೊಂದರೆಗಳು, ಖರ್ಚಿನ ಮೊತ್ತದ ಮಾಹಿತಿಯುಳ್ಳ ಸಮಗ್ರ ವರದಿಯನ್ನು ಸಲ್ಲಿಸಿದ್ದಲ್ಲಿ,  

ಈ ವರದಿಯನ್ನು ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಅಧ್ಯಕ್ಷ ಬೀರಣ್ಣ ಮಾತನಾಡಿ, ಜಿಲ್ಲೆಯಲ್ಲಿ ಕರಾವಳಿ ಭಾಗ, ಮಲೆನಾಡು ಭಾಗ ಮತ್ತು ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳ ಕುರಿತಂತೆ ಸಮಗ್ರ ಕ್ರೂಡೀಕೃತ ವರದಿಯನ್ನು ಸಮಿತಿಯ ಎಲ್ಲಾ ಸದಸ್ಯರು ಸಿದ್ದಪಡಿಸುತ್ತಿದ್ದು, ಆದಷ್ಟು ಶೀಘ್ರದಲ್ಲಿ ಪೂರ್ಣ ವರದಿಯನ್ನು ಸಲ್ಲಿಸಲಾಗುವುದು ಎಂದರು.ಸಮಿತಿಯ ಸದಸ್ಯರಾದ ಹಿರಿಯ ಪತ್ರಕರ್ತ ಜಿ.ಯು, ಭಟ್ ಹೊನ್ನಾವರ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮೊದಲಿಗೆ ಶಿಸ್ತು ತರಬೇಕಿದೆ, ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯನ್ನು ನಿವಾರಿಸಬೇಕು, ಹೊನ್ನಾವರ ತಾಲೂಕಿನಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಇಲ್ಲಿ ಸರ್ಕಿಟ್ ಟೂರಿಸಂ ಮಾಡಬೇಕು, 

 ಇಲಾಖೆಗಳ ನಡುವೆ ಸಮನ್ವಯವಿರಬೇಕು, ಅನಧಿಕೃತ ಹೋಂ ಸ್ಟೇಗಳ ಹಾವಳಿ ತಡೆಯಬೇಕು ಎಂದರು.ಎಲ್ಲಾ ಪ್ರವಾಸಿ ತಾಣಗಳನ್ನು ಸಂದರ್ಶಿಸುವ ರೂಟ್ ಸಿದ್ದಪಡಿಸಿದ್ದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಈ ಸ್ಥಳಗಳಿಗೆ ಐಷಾರಾಮಿ ಬಸ್ ವ್ಯವಸ್ಥೆ ಮಾಡಲಾಗುವುದು, ಪ್ರವಾಸಿಗರು ಕನಿಷ್ಠ 2 ದಿನ ಇಲ್ಲಿ ನೆಲೆಸಿ, ಸಂದರ್ಶಿಸಲು ಸೂಕ್ತವಾದ ಯೋಜನೆ ರೂಪಿಸಿ, ಈ ಭಾಗದಲ್ಲಿನ ಪ್ರವಾಸಿ ಭಾಗೀದಾರರಿಗಾಗಿ ಕೋಸ್ಟಲ್ ಟೂರಿಸಂ ಇನ್ ವೆಸ್ಟರ್ ಮೀಟ್ ಮಾಡುವ ಉದ್ದೇಶವಿದ್ದು, ಜಿಲ್ಲೆಯ ಎಲ್ಲಾ ಪ್ರವಾಸಿ ಭಾಗೀದಾರರು ಇದರಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬಹುದು,  

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಎಲ್ಲಾ ರೀತಿಯ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ , ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಚೈತ್ರಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ನಾವಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸದಸ್ಯರಾದ ಎಸ್‌.ಜಿ.ಹೆಗಡೆ ಬೆದೇಕಲ್, ತಾಂಡೋರಾಯನ್ ಜಿ.ಎಮ್, ಶೈಲಜಾ ಗೊರನಮನೆ, ವೇಣುಗೋಪಾಲ ಮದ್ಗುಣಿ, ಯಾಸ್ಮಿನ್ ಕಿತ್ತೂರ ಹಾಜರಿದ್ದರು.