ಹೆಣ್ಣುಮಕ್ಕಳು ಸುಶಿಕ್ಷಿತರಾಗಿ, ಸಂಘಟಿತರಾಗಿ: ಡಾ.ನಾಗಲಕ್ಷ್ಮೀ ಚೌಧರಿ
ಬಳ್ಳಾರಿ 13:ಉತ್ತಮ ಶಿಕ್ಷಣ ಪಡೆಯುವ ಮೂಲಕ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಹೆಣ್ಣುಮಕ್ಕಳು ಸುಶಿಕ್ಷಿತರಾಗಿ ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ತಿಳಿಸಿದರು.
ನಗರದ ಕೋಟೆ ಪ್ರದೇಶದ ಸಂತ ಜನರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿನಿಯರೊಂದಿಗೆ ಶುಕ್ರವಾರ ಏರಿ್ಡಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಮಹಿಳೆಯರ ಭವಿಷ್ಯವನ್ನು ನಿರ್ಧರಿಸುವ ಬಹುದೊಡ್ಡ ಅಸ್ತ್ರವಾಗಿದೆ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ಓದಿನ ಕಡೆಗೆ ಗಮನಹರಿಸುವ ಮೂಲಕ ಸಾಧನೆಯ ಶಿಖರವೇರಬೇಕು ಎಂದರು.
ಹೆಣ್ಣುಮಕ್ಕಳು ಹೊರಗಿನ ಪ್ರಪಂಚದ ಸಾಮಾನ್ಯ ಜ್ಞಾನ ಬೆಳಿಸಿಕೊಳ್ಳಬೇಕು. ಕಾಲೇಜು ಸಮಯದಲ್ಲಿ ಒಂದೇ ತೋಟದ ಮೊಗ್ಗುಗಳಿದ್ದಂತೆ. ಹೂವಾಗಿ ಅರಳಬೇಕು. ಅಹಂಕಾರ ತ್ಯಜಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಹೆಣ್ಣುಮಕ್ಕಳು ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳು, ಭದ್ರತೆ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಹೊಂದಬೇಕು. ಕಾನೂನು ಬಗೆಗೆ ತಾವು ಅರಿತು ಸಮಾಜದ ಇತರರಿಗೂ ಅರಿವು ಮೂಡಿಸಬೇಕು. ಆಗ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಾಗಲಿದೆ ಎಂದರು.
ಹೆಣ್ಣುಮಕ್ಕಳಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಎಚ್ಚರ ವಹಿಸಬೇಕಿದೆ. ಗೊತ್ತಿಲ್ಲದವರ ಜೊತೆ ಸ್ನೇಹ ಹೊಂದಬಾರದು. ಫೇಕ್ ಅಂಕೌಂಟ್‌ಗಳಿಂದ ಮೋಸ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಮಹಿಳೆಯರು ಮೊಬೈಲ್‌ಗಳಿಂದ ಪ್ರಭಾವಿತರಾಗದೇ ಸಕಾರಾತ್ಮಕ ಚಿಂತನೆಗಳಿಗೆ ಅದ್ಯತೆ ನೀಡಬೇಕು. ಸದೃಢ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಹೆಣ್ಣುಮಕ್ಕಳು ಭಯಭೀತರಾಗಬಾರದು. ಇಲ್ಲದಿದ್ದಲ್ಲಿ ಸಮಾಜದಲ್ಲಿ ಶೋಷಣೆಗೊಳಗಾಗುತ್ತೀರಿ, ಮಕ್ಕಳು ಸಮಾಜದಲ್ಲಿ ಯಾವುದೇ ಬಗೆಯ ದೌರ್ಜನ್ಯಗಳಾದರೂ ನೇರವಾಗಿ ಪೊಲೀಸರಿಗೆ ದೂರು ನೀಡಬೇಕು. ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ತಿಳಿಸಬೇಕು. ಸೈಬರ್ ಕ್ರೈಂ ಸಂಬಂಧಿಸಿದ ದೂರುಗಳಿದ್ದಲ್ಲಿ 1930 ಗೆ ಸಂಪರ್ಕಿಸಬೇಕು ಎಂದು ಅವರು ಹೇಳಿದರು.
ಯುವಸಮೂಹವು ಪ್ರೀತಿ-ಪ್ರೇಮ ಗೀಳಿಗೆ ಒಳಗಾಗದೇ, ತಮ್ಮ ಗುರಿಯೆಡೆಗೆ ಗಮನ ಹರಿಸಿ ಯಶಸ್ಸಿನ ಹಾದಿ ಕಡೆಗೆ ಸಾಗಬೇಕು. ತಂದೆ-ತಾಯಿಗೆ ಗೌರವಿಸಿ ಸಮಾಜದ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ಈಗಿನ ಮಕ್ಕಳು ಗುರುತಿಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್.ಕೆ.ಹೆಚ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ತಹಶೀಲ್ದಾರ ಗುರುರಾಜ, ಸಂತ ಜನರ ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕ ಫಾ.ಫ್ರಾನ್ಸಿಸ್ ಭಾಷಂ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಹಾಗೂ ಇತರರು ಉಪಸ್ಥಿತರಿದ್ದರು.