ನಲಿಕಲಿ ಬೋಧನಾ ಪದ್ಧತಿ ಮೂಲಕ ಮಕ್ಕಳಿಗೆ ಅಭ್ಯಾಸ ಮಾಡಿಸಿ: ನಲಿನ್ ಅತುಲ್‌

Get kids to practice through Nalikali teaching method: Nalin Atul

ನಲಿಕಲಿ ಬೋಧನಾ ಪದ್ಧತಿ ಮೂಲಕ ಮಕ್ಕಳಿಗೆ ಅಭ್ಯಾಸ ಮಾಡಿಸಿ: ನಲಿನ್ ಅತುಲ್‌

ಕೊಪ್ಪಳ 15 : ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರ್ವ ಪ್ರಾಥಮಿಕ ಹಂತವು ಪ್ರಮುಖವಾಗಿದ್ದು, ನಲಿಕಲಿ ಬೋಧನಾ ಪದ್ಧತಿ ಮೂಲಕ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.  ಅವರು ಗುರುವಾರ ಜಿಲ್ಲಾ ಪಂಚಾಯತ್ ಜೆ.ಹೆಚ್‌.ಪಟೇಲ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿ.ಆರ್‌.ಪಿ ಮತ್ತು ಸಿ.ಆರ್‌.ಪಿ ಯವರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.  ಎಲ್ಲಾ ಸಿ.ಆರ್‌.ಪಿ.ಗಳು ಶಾಲೆಗೆ ಸಂದರ್ಶನ ಮಾಡಿದಾಗ, ಮೊದಲು ಅಲ್ಲಿನ ಕಲಿಕಾ ವ್ಯವಸ್ಥೆಯನ್ನು ಪರೀಶೀಲಿಸಬೇಕು. ಶಿಕ್ಷಕರು ಮಕ್ಕಳಿಗೆ ಯಾವ ರೀತಿಯಲ್ಲಿ ಪಾಠ ಮಾಡುತ್ತಿದ್ದಾರೆ ಎಂಬುವುದನ್ನು ಗಮನಿಸಿ, ಪಾಠ ಮಾಡುವ ಮಾದರಿಗಳ ಬಗ್ಗೆ ಅಗತ್ಯ ಮಾರ್ಗದರ್ಶನ ಮಾಡಬೇಕು. ಇದರ ಜೊತೆಗೆ ಮಕ್ಕಳ ಫಲಿತಾಂಶ ವೀಕ್ಷಣೆ ಮಾಡಿ, ಮಕ್ಕಳ ಕಲಿಕೆಗೆ ವಿಶೇಷ ಒತ್ತು ನೀಡಬೇಕು. ಸಿ.ಆರ್‌.ಪಿ.ಗಳು 20ಕ್ಕಿಂತ ಹೆಚ್ಚು ಶಾಲಾ ಸಂದರ್ಶನ ಮಾಡಬೇಕು. ಈ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ವರದಿ ನೀಡಬೇಕು. ಇದರ ಜೊತೆಗೆ ಬಿ.ಆರ್‌.ಸಿ.ಗಳು ಪ್ರತಿ ತಿಂಗಳು ಸರ್ಕಾರಿ ಶಾಲೆಗಳ ಸಂದರ್ಶನ ಮಾಡಬೇಕು. ನಿಗದಿತ ಗುರಿಯನ್ನು ಪೂರ್ಣಗೊಳಿಸದ ಮತ್ತು ವರದಿ ನೀಡದ ಸಿ.ಆರ್‌.ಪಿ ಮತ್ತು ಬಿ.ಆರ್‌.ಸಿ.ಗಳ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.ಎಸ್‌.ಎ.ಟಿ.ಎಸ್ ಪ್ರಕಾರ ಎಫ್‌.ಎ-1 ರಿಂದ ಎಫ್‌.ಎ-4 ವರೆಗೆ ಫಲಿತಾಂಶದ ವಿವರವನ್ನು ಎಸ್‌.ಎ.ಟಿ.ಎಸ್‌.ನಲ್ಲಿ ಅಪ್ಲೋಡ್ ಮಾಡಬೇಕು. ಜಿಲ್ಲೆಯಲ್ಲಿರುವ ಒಟ್ಟು ಶಾಲೆಗಳಲ್ಲಿ ಶೇ.20 ರಷ್ಟು ಶಾಲೆಯವರು ಮಾತ್ರ ಎಸ್‌.ಎ.ಟಿ.ಎಸ್‌.ನಲ್ಲಿ ಕಾರ್ಯ ಚಟುವಟಿಕೆ ಅಪ್ಲೋಡ್ ಮಾಡಿದ್ದು, ಈ ಬಗ್ಗೆ ಹೆಚ್ಚು ಗಮನ ಹರಿಸಿ, ಸಂಬಂಧಪಟ್ಟ ನೋಡಲ್ ಅಧಿಕಾರಿಗಳು, ಎಲ್ಲಾ ಸಿ.ಆರ್‌.ಪಿ., ಬಿ.ಆರ್‌.ಪಿ., ಬಿ.ಆರ್‌.ಸಿ., ಬಿ.ಇ.ಓ. ಮತ್ತು ಡಯಟ್ ಅಧಿಕಾರಿಗಳು ಸೇರಿ, ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದು ಹೇಳಿದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ಮಕ್ಕಳು 10ನೇ ತರಗತಿಗೆ ಬಂದಾಗ ಪರೀಕ್ಷಾ ಫಲಿತಾಂಶ ನೋಡುತ್ತೇವೆ. ಆದರೆ, 2025-26ನೇ ಸಾಲಿನ ಆರಂಭದಿಂದ 1ನೇ ತರಗತಿಯಿಂದಲೇ ಎಫ್‌.ಎ ಪರೀಕ್ಷೆ ಹಾಜರಾತಿ ಪರೀಶೀಲನೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಹಂತದಲ್ಲಿಯೇ ಮಕ್ಕಳ ಕಲಿಕಾ ವ್ಯವಸ್ಥೆಯು ಸುಧಾರಣೆಯಾಗುವುದು ಅತ್ಯವಶ್ಯಕವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶೇ.25 ರಷ್ಟು ಅನುದಾನ ಸರ್ಕಾರಿ ಶಾಲೆಗಳಿಗೆ ಹೋಗುತ್ತದೆ. ಈ ಅನುಧಾನದಡಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಗುಣಾತ್ಮಕ ಶಿಕ್ಷಣದ ಕಡೆ ಗಮನಹರಿಸಬೇಕು. ಗುಣಾತ್ಮಕ ಶಿಕ್ಷಣವು ಮಕ್ಕಳಿಗೆ ಅನುಕೂಲ ವಾಗುವಂತಿರಬೇಕು ಎಂದು ಹೇಳಿದರು. ರಾಜ್ಯ ನಲಿ-ಕಲಿ ಸಂಪನ್ಮೂಲ ವ್ಯಕ್ತಿ ಅಜಯ ಅವರು ಮಾತನಾಡಿ, ಮಕ್ಕಳಿಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಗಣಿತ ವಿಷಯದ ಬಗ್ಗೆ ಪರಿಚಯ ಮಾಡಿಸಬೇಕು. ಸಾಮೂಹಿಕ ಗುಂಪುಗಳಲ್ಲಿ ಕಲಿಕಾ ಪ್ರಕ್ರಿಯೆಗಳನ್ನು ನಡೆಸಬೇಕು. ಮಕ್ಕಳಿಗೆ ಕಾಗೆ, ಬೆಕ್ಕು ಹಾಗೂ ಇತರೆ ಪ್ರಾಣಿ ಪಕ್ಷಿಗಳ ಚಿತ್ರ, ಅಂಕಿ-ಸಂಖ್ಯೆಗಳ ಕಾರ್ಡ್‌, ಲೋಗೋ ಮೂಲಕ ಪ್ರಾಯೋಗಿಕವಾಗಿ ಕಲಿಸಬೇಕು. ಸಂಕಲನಕ್ಕೆ ಶಿಕ್ಷಕರು ಫೋಟೋಗಳನ್ನು ಕಲ್ಪಿಸಿಕೊಟ್ಟು, ಮಗ್ಗಿಗಳ ಸ್ಥಾನ ಬೆಲೆಯನ್ನು ಪರಿಚಯಮಾಡಿಕೊಡಬೇಕಾಗುತ್ತದೆ. ಅಬಾಕಸ್ ಮ್ಯಾತ್ಸ್‌ ಕಿಟ್, ನಲಿ ಕಲಿ ಕಿಟ್‌ಗಳ ಮೂಲಕ ನಲಿಕಲಿ ಮಕ್ಕಳಿಗೆ ಪಾಠಗಳನ್ನು ಹೇಳಿ ಕೊಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದರ್ ಸೇರಿದಂತೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿ.ಆರ್‌.ಪಿ ಮತ್ತು ಸಿ.ಆರ್‌.ಪಿ.ಗಳು ಹಾಗೂ ಮತ್ತಿತರರಿದ್ದರು.