ಭವಿಷ್ಯದಲ್ಲಿ ಕಿವುಡುತನ ತಡೆಗಟ್ಟಲು ತಪ್ಪದೇ ಶ್ರವಣ ಪರೀಕ್ಷೆ ಮಾಡಿಸಿ: ಡಾ.ಯಲ್ಲಾ ರಮೇಶ್‌ಬಾಬು

Get a hearing test done to prevent deafness in the future: Dr. Yalla Rameshbabu

ಭವಿಷ್ಯದಲ್ಲಿ ಕಿವುಡುತನ ತಡೆಗಟ್ಟಲು ತಪ್ಪದೇ ಶ್ರವಣ ಪರೀಕ್ಷೆ ಮಾಡಿಸಿ: ಡಾ.ಯಲ್ಲಾ ರಮೇಶ್‌ಬಾಬು 

ಬಳ್ಳಾರಿ 10: ಜನನದ ನಂತರ ಎಲ್ಲಾ ನವಜಾತ ಶಿಶುಗಳಿಗೆ ತಿಂಗಳಲ್ಲಿ ಎರಡು ಬಾರಿ ಕಡ್ಡಾಯವಾಗಿ ಶ್ರವಣ ಪರೀಕ್ಷೆ ಮಾಡಿಸಬೇಕು. ಈ ಮೂಲಕ ಆರಂಭದಲ್ಲಿಯೇ ಶ್ರವಣದೋಷದ ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಕಿವಿ, ಮೂಗು, ಗಂಟಲು ವಿಭಾಗ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಭವಿಷ್ಯದಲ್ಲಿ ಮಗು ಶ್ರವಣ ತೊಂದರೆಯಿಂದ ಹೊರಬರಲು ಜನನ ನಂತರದಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ತಪಾಸಣೆ ಮಾಡಿಸಬೇಕು. ಜಿಲ್ಲಾ  ಆಸ್ಪತ್ರೆಯಲ್ಲಿ ಶ್ರವಣದೋಷದ ಚಿಕಿತ್ಸೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಈಗಾಗಲೇ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 14 ಜನರಿಗೆ ಕನಿಷ್ಠ 10 ಲಕ್ಷ ವೆಚ್ಚವಾಗುವ ಕಾಕ್ಲಿಯರ್ ಇನ್‌ಪ್ಲಾಂಟ್, 400 ಜನರಿಗೆ ಶ್ರವಣಸಾಧನ, 5240 ನವಜಾತ ಶಿಶುಗಳ ಶ್ರವಣ ಪರೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದರು. 

*ಕಿವುಡತನಕ್ಕೆ ಕಾರಣಗಳು:* 

ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕೌಟಿಂಬಿಕ ಹಿನ್ನೆಲೆ, ಗರ್ಭಾವಸ್ಥೆಯಲ್ಲಿನ ಸೋಂಕು, ದಿನ ತುಂಬುವ ಮುನ್ನ ಜನಸಿದ್ದು, ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ, ಜನನದ ನಂತರ ತೀವ್ರ ಕಾಮಾಲೆಯಿಂದ ಕಿವುಡುತನ ಕಂಡುಬರುತ್ತದೆ.  

ಮಕ್ಕಳು ಮತ್ತು ವಯಸ್ಕರಲ್ಲಿ ಮೆನಿಂಜಜೈಟಿಸ್, ದಡಾರ, ಗದಗಟ್ಟು ಅಥವಾ ಕಿವಿಯ ಸೋಂಕುಗಳು, ಕೆಲವು ಓಷಧಿಗಳನ್ನು ಬಳಸುವುದರಿಂದ, ತಲೆ ಅಥವಾ ಕಿವಿಗೆ ಗಾಯ, ಯಾವುದೇ ಸನ್ನಿವೇಶದಲ್ಲಿ ಜೋರಾಗಿ ಶಬ್ದಗಳಿಗೆ ಒಳಗೊಳ್ಳುವುದು, ಅಸುರಕ್ಷಿತ ಮಟ್ಟದಲ್ಲಿ ವೈಯಕ್ತಿಕ ಆಡಿಯೋ ಸಾಧನಗಳ ಮೂಲಕ ಕೇಳುತ್ತಿದ್ದರೆ, ಕಿವಿಯ ಮೇಣ ಅಥವಾ ಬೇಡದ ವಸ್ತುವನ್ನು ಕಿವಿಯಲ್ಲಿ ಹಾಕಿಕೊಂಡಾಗ ಕಿವುಡುತನ ಉಂಟಾಗುತ್ತದೆ. 

ಹಿರಿಯ ನಾಗರಿಕರಲ್ಲಿ ಸಾಮಾನ್ಯ ವಯಸ್ಸಾದ ಪ್ರಕ್ರಿಯೆ, ಯಾವುದೇ ಸನ್ನಿವೇಶದಲ್ಲಿ ಜೋರಾದ ಶಬ್ಧಗಳಿಗೆ ಒಳಗೊಳ್ಳುವುದು, ತೀವ್ರ ರಕ್ತದೊತ್ತಡ, ಮಧುಮೇಹ, ಕೆಲವು ಓಷಧಿಗಳನ್ನು ಬಳಸುವುದರಿಂದ ಕಿವುಡುತನ ಉಂಟಾಗುತ್ತದೆ ಎಂದು ಡಿಹೆಚ್‌ಒ ತಿಳಿಸಿದರು. 

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್‌.ಬಸರೆಡ್ಡಿ ಅವರು ಮಾತನಾಡಿ, ಮಕ್ಕಳು ಮತ್ತು ವಯಸ್ಕರು ಒಳಗೊಂಡು ಕಿವಿಯೊಳಗೆ ಯಾವುದೇ ವಸ್ತುಗಳನ್ನು ಹಾಕಬಾರದು, ಗದ್ದಲದ ಸ್ಥಳಗಳಲ್ಲಿ ಕಿವಿ ಕವಚ ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ತೆಗೆದುಕೊಳ್ಳುವ ಓಷಧಿಗಳು ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂಬುದರ ಕುರಿತು ವೈದ್ಯರಿಂದ ಖಚಿತಪಡಿಸಿಕೊಳ್ಳಬೇಕು. ನಿಯಮಿತವಾಗಿ ಕಿವಿಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಬೇಕು ಎಂದು ಹೇಳಿದರು. 

ಮಗುವಿಗೆ ಕಿವಿ ನೋವು, ಕಿವಿ ಸೋರುವುದು ಅಥವಾ ಕಿವಿ ಮುಚ್ಚಿದೆ ಎಂದು ಕಂಡುಬಂದರೆ ತಕ್ಷಣ ಮಗುವನ್ನು ವೈದ್ಯರ ಬಳಿ ಪರೀಕ್ಷಿಸಬೇಕು. ಮುಖ್ಯವಾಗಿ ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬಾರದು, ಮಗುವಿನ ಕಿವಿಯ ಮೇಲೆ ಹೊಡೆಯಬಾರದು, ಜೋರಾದ ಶಬ್ಧದಿಂದ ಮಗುವನ್ನು ದೂರವಿರಿಸಬೇಕು ಎಂದು ತಿಳಿಸಿದರು. 

ಪ್ರಾಸ್ತಾವಿಕವಾಗಿ ಜಿಲ್ಲಾ ಶ್ರವಣದೋಷ ನಿವಾರಣಾ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಶ್ರವಣದೋಷದಿಂದ ಬಳಲುತ್ತಿದ್ದ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಕಿನ್ನಾಳ್, ಇಎನ್‌ಟಿ ತಜ್ಞ ವೈದ್ಯರಾದ ಡಾ.ಅನಿಲ್ ರೆಡ್ಡಿ, ಡಾ.ವಿನಯ್, ಶುಶ್ರೂಷಣಾ ಅಧೀಕ್ಷಕರಾದ ವಿಮಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಾ.ವಿಶಾಲಾಕ್ಷಿ, ಡಾ.ಸುರೇಶ್ ಕುಮಾರ್, ಸಹಾಯಕ ಆಡಳಿತ ಅಧಿಕಾರಿ ಗುಮಾಸ್ತೆ ದೇಸಾಯಿ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ಶ್ರವಣ ಸಾಧನ ಪಡೆದ ಫಲಾನುಭವಿಗಳು ಉಪಸ್ಥಿತರಿದ್ದರು.