ಗಟಾರು ನಿರ್ವಹಣೆ ಅವ್ಯವಸ್ಥೆ: ಜನತೆಗೆ ತೊಂದರೆ

ಲೋಕದರ್ಶನ ವರದಿ

ಯಲ್ಲಾಪುರ: ಮಳೆಯಿಲ್ಲದೇ ಕಂಗೆಟ್ಟದ್ದ ಪಟ್ಟಣದಲ್ಲಿ ಮಳೆ ಆರಂಭಗೊಂಡಿದೆ. ಬುಧವಾರ  ಜೋರಾಗಿ , ಸಂಜೆಯ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ತಗ್ಗಿನ ಪ್ರದೇಶಗಳಲ್ಲಿ ನೀರು ಹರಿಯುತ್ತಿದೆ. ಸುರಿಯುತ್ತಿರುವ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು ಪಟ್ಟಣದ ಮುಂಡಗೋಡ ರಸ್ತೆಯ ರವೀಂದ್ರನಗರ ಕಲಾವಿದ ಮಹೇಶ ಅಲ್ಮಠ ಮನೆಯ ಸಮೀಪದ ಮುಖ್ಯರಸ್ತೆ ಹಾಗೂ ಕಾಳಮ್ಮನಗರದ ಮುಖ್ಯ ರಸ್ತೆಯ ಗಟಾರ ಸ್ವಚ್ಚಗೊಳಿಸದೇ ಇರುವ ಕಾರಣ ನರಸಿಂಹ ಮೂರ್ತಿ  ಎಂಬುವವರ ಮನೆಯ ಒಳಗೆ ನುಗ್ಗಿದೆ. 

  ವರಾಂಡ ಹಾಗೂ ಮನೆಯೊಳಗೆ ನೀರು ತುಂಬಿದ್ದು, ಮನೆಯೊಳಗೆ ತುಂಬಿದ ನೀರನ್ನು ಹೊರ ಹಾಕಲು ಮನೆಯ ಜನರೆಲ್ಲ ಹರ ಸಾಹಸ ಪಡುತ್ತಿದ್ದಾರೆ. ಮಳೆಗಾಲ ಸಮೀಪಿಸುತ್ತಿದ್ದರೂ ಗಟಾರಗಳನ್ನು ಪಟ್ಟಣ ಪಂಚಾಯ್ತಿ ಸ್ವಚ್ಚಗೊಳಿಸದೇ ಇರುವುದಕ್ಕೆ ಮನೆಗಳಿಗೆ ನೀರು  ನುಗ್ಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಇದೆ ರಸ್ತೆಯಲ್ಲಿ ದಿನಾಲೂ ಪುಟ್ಟ ಶಾಲಾ ಮಕ್ಕಳು ವೃದ್ದರು ಓಡಾಡುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.ಇಲ್ಲಿನ ವಾರ್ಡನ ಸದಸ್ಯರು ಗಮನಹರಿಸಿ ಸಮಸ್ಯೆಗೆ ಸ್ಪಂದಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.