ಬಾಲ ವಿಕಾಸ ಅಕಾಡೆಮಿ ನಿರ್ದೇಶಕರಾಗಿ ಗಜಾನನ ಮನ್ನಿಕೇರಿ ಪದಗ್ರಹಣ

Gajanan Mannikeri takes oath as Director of Bala Vikas Academy

ಬಾಲ ವಿಕಾಸ ಅಕಾಡೆಮಿ ನಿರ್ದೇಶಕರಾಗಿ ಗಜಾನನ ಮನ್ನಿಕೇರಿ ಪದಗ್ರಹಣ 

ಹಾರೂಗೇರಿ 06: ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷ, ಶಾಲಾ ಶಿಕ್ಷಣ ಇಲಾಖೆ ಧಾರವಾಡದ ವಿಶ್ರಾಂತ ಜಂಟಿ ನಿರ್ದೇಶಕರಾಗಿದ್ದ ಗಜಾನನ ಮನ್ನಿಕೇರಿ ಅವರನ್ನು ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿಯ ನೂತನ ನಿರ್ದೇಶಕರಾಗಿ ಸರ್ಕಾರ ನೇಮಕ ಮಾಡಿದೆ. 

  ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ನಿರ್ದೇಶಕರಾದ ಗಜಾನನ ಮನ್ನಿಕೇರಿ ಅವರನ್ನು ಸತ್ಕರಿಸಿ, ಅಭಿನಂದಿಸಿ ಅಧಿಕಾರ ವಹಿಸಿಕೊಟ್ಟರು. ಜೊತೆಗೆ ಎಂ.ವೈ.ಜರಾಳೆ, ಶ್ರೀನಿವಾಸ್ ಸೊರಟೂರ ಮತ್ತು ಚೆನ್ನಕ್ಕ ಬಿರಾದಾರ ಅವರನ್ನೂ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.  

  ನೂತನ ನಿರ್ದೇಶಕರನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಡಿಯಲ್ಲಿ ಬರುವ 18 ವರ್ಷದೊಳಗಿನ ಮಕ್ಕಳ ಕಲ್ಯಾಣ, ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಇಲಾಖೆ ಮತ್ತು ಖಾಸಗಿ ಸಂಘ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕು, ಸೌಲಭ್ಯಗಳು, ಆರೋಗ್ಯ, ದೌರ್ಜನ್ಯ ಪ್ರಕರಣಗಳು, ವಿವಿಧ ಯೋಜನೆಗಳ ಅನುಷ್ಠಾನ ಸಂಬಂಧಿಸಿದ ಸಮಸ್ಯೆಗಳು ಮತ್ತು ಘಟನೆಗಳ ಕುರಿತು ಕಚೇರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ, ವಿವಿಧ ಇಲಾಖೆಗಳ ಪೂರಕ ಯೋಜನೆಗಳನ್ನು ಪರೀಶೀಲಿಸುವ ಬಗ್ಗೆ ಮಾಹಿತಿ ನೀಡಿದರು. 

 ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಗಜಾನನ ಮನ್ನಿಕೇರಿ ಮಾತನಾಡಿ ದಕ್ಷತೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಕಾರ್ಯದರ್ಶಿ ಹಾಗೂ ಯೋಜನಾಧಿಕಾರಿ ಭಾರತಿ ಶೆಟ್ಟರ್, ವೈ.ಎಚ್‌.ಬಣವಿ, ರಾಜಶೇಖರ ಹೊನ್ನಪ್ಪನವರ, ಗುರು ತಿಗಡಿ, ನಾರಾಯಣ ಭಜಂತ್ರಿ, ಬಶೆಟ್ಟಿ, ಆರ್‌.ಆರ್‌.ಸದಲಗಿ, ಬಿಇಒ ಮಂಜುನಾಥ ಕಲಾದಗಿ, ಎಸ್‌.ಕೆ.ಮಾಕಣ್ಣವರ, ಛಬ್ಬಿ, ತಡಸದ, ಕಣವಿ ಉಪಸ್ಥಿತರಿದ್ದರು.