ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರಿಂದ ಕಾಮಗಾರಿಗಳ ಪರೀಶೀಲನೆ
ಕಾರವಾರ, ಫೆ.18 :- ಸಿದ್ದಾಪುರ ತಾಲೂಕಿನ ದೊಡ್ಮನೆ, ಇಟಗಿ ಹಾಗೂ ಹಲಗೇರಿ ಪಂಚಾಯತ್‌ಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಮಂಗಳವಾರ ಭೇಟಿ ನೀಡಿ ಕಾಮಗಾರಿಗಳ ಪರೀಶೀಲನೆ ನಡೆಸಿದರು.
ಸಿದ್ದಾಪುರ ತಾಲೂಕಿನಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡ ಶೌಚಾಲಯ, ಗ್ರಂಥಾಲಯ, ಹಾಗೂ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿಪ್ಲಿ ಫಾಲ್ಸ್ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳ ಪರೀಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ದೊಡ್ಮನೆ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿಯ ಕುರಿತು ಮಾಹಿತಿ ಪಡೆದು ಪಂಚಾಯತ್ ನಿರ್ವಹಣೆ ಕುರಿತು ಶ್ಲಾಘಸಿದರು. ನಂತರ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಈ ವೇಳೆ ಶಾಲಾ ಅಡುಗೆ ಕೋಣೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವನ್ನು ಪರೀಶೀಲಿಸಿ ಸ್ವಚ್ಛತೆ ಕುರಿತು ಜಾಗೃತಿ ವಹಿಸಲು ಸೂಚಿಸಿದರು. ಪ್ರೌಢಶಾಲೆ ದೊಡ್ಮನೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಇಂಗ್ಲೀಷ್ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಕ್ಕಳ ವಿದ್ಯಾಭ್ಯಾಸ ಪ್ರಗತಿಗೆ ಅಗತ್ಯವಾದ ಕ್ರಮಗಳನ್ನು ತಾಲ್ಲೂಕಿನೆಲ್ಲೆಡೆ ರೂಪಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅದಿ ದೇವರಾಜ್ ಹಿತ್ತಲಕೊಪ್ಪ, ತಾ.ಪ ಯೋಜನಾಧಿಕಾರಿ ಬಸವರಾಜ್, ಶಿಕ್ಷಣ ಇಲಾಖೆ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿಗಳು, ಜೆಜೆಎಮ್ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.