ಭವಿಷ್ಯದಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆ ಆರ್ಥಿಕ ಅಭಿವೃದ್ಧಿಗೆ ಪೂರಕ: ಬಾಲಚಂದ್ರ ಬಾ. ಜಾಬಶೆಟ್ಟಿ

Future Solar Power Generation Complements Economic Development: Balachandra Ba. Jobashetti

ಭವಿಷ್ಯದಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆ ಆರ್ಥಿಕ ಅಭಿವೃದ್ಧಿಗೆ ಪೂರಕ: ಬಾಲಚಂದ್ರ ಬಾ. ಜಾಬಶೆಟ್ಟಿ 

ಧಾರವಾಡ 20: ಸೌರ ವಿದ್ಯುತ್ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ ಎಂದು ರಾಮದುರ್ಗದ ಗ್ರೀನ್ ಲ್ಯಾಂಡ್ ಬಯೋಟೆಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಜಾಬಶೆಟ್ಟಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ "ಸೌರ ವಿದ್ಯುತ್ ಉತ್ಪಾದನಾ ಅವಕಾಶಗಳು ಮತ್ತು ಸಬ್ಸಿಡಿ ಲಭ್ಯತೆ" ಕುರಿತು ಮಾತನಾಡಿದರು.  

ಮುಂದುವರೆದು ಮಾತನಾಡಿದ ಅವರು, ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ, ಒಬ್ಬನೇ ಸೂರ್ಯ, ಒಂದೇ ವಿದ್ಯುತ್ ಗ್ರಿಡ್ ಪರಿಕಲ್ಪನೆ ಮತ್ತು ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಮಾನಗಳಲ್ಲಿ ಜಗತ್ತನ್ನು ಆಳುವ ಶಕ್ತಿಯಾಗಿ ಸೋಲಾರ್ ಎನರ್ಜಿ (ಸೌರ್ಯ ಸೌರ ವಿದ್ಯುತ್) ಬರಲಿದೆ. ಇದಕ್ಕೆ ಪೂರಕವಾಗಿ ಅಂತರರಾಷ್ಟ್ರೀಯ ಮಟ್ಟದ ಒಪ್ಪಂದ ಸಾರ್ಕ್‌ ಸಮ್ಮೇಳನದ ನಿರ್ಣಯದಂತೆ 2070ರ ಹೊತ್ತಿಗೆ ವಿಶ್ವದಲ್ಲಿ ಜೀರೋ ಕಾರ್ಬನ್ ವಾತಾವರಣ ಮೂಡಲಿದೆ. ವಿದ್ಯುತ್ ಜಾಲದೊಂದಿಗೆ ಗ್ರಿಡ್ ಟೈಡ್ ಮನೆ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿ, ಬಳಸಿ ಹಣ ಉಳಿಸುವ ಮತ್ತು ಹಣ ಗಳಿಸುವ ಕುರಿತು ವಿವರಿಸಿದರು. ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುವುದರೆಡೆಗೆ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.  

ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ವಿವಿಧ ಕಿಲೋ ವ್ಯಾಟ್ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ರೂ. 78,000 ವರೆಗೆ ಸಹಾಯಧನ ನೀಡುತ್ತಿದೆ. ಇಂಗಾಲದ ಹೆಜ್ಜೆ ಗುರುತುಗಳನ್ನು ಅಳಿಸಲು ಸಹಕಾರಿಯಾಗಿದ್ದು ಹೆಚ್ಚು ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯಬೇಕು. ಉಷ್ಣಸ್ಥಾವರ ವಿದ್ಯುತ್ ಉತ್ಫಾದನಾ ಘಟಕಗಳಿಂದ ಸ್ಥಳೀಯರಿಗೆ ರೋಗರುಜಿನಗಳಿಗೆ ಸಿಲುಕುವ ಅಪಾಯವಿದೆ. ಸೌರವಿದ್ಯುತ್ ಬಳಕೆ ಅಪಾಯವಿಲ್ಲ. ಸೌರ ವಿದ್ಯುತ್ ಉತ್ಪಾದನೆಯಲ್ಲಿ ರಾಜಸ್ಥಾನ 16000 ಮೇಗಾವ್ಯಾಟ, ಗುಜರಾತ್ 8500 ಮೇಗಾವ್ಯಾಟ, ಚೆನೈ 6000 ಮೇಗಾವ್ಯಾಟ ಸೌರ ವಿದ್ಯುತ್ ಉತ್ಪಾದನೆ ಮಾಡಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದರೆ ಕರ್ನಾಟಕ 4 ನೇ ಸ್ಥಾನದಲ್ಲಿದೆ. ಒಳ್ಳೆಯ ಪ್ಯಾನೆಲ್‌ಗಳ ಆಯ್ಕೆ ಮಾಡಿಕೊಳ್ಳುವುದರಿಂದ ಉತ್ತಮ ಬಾಳಿಕೆ ಬರುವುದರ ಜೊತೆಗೆ ಅದರ ನಿರ್ವಹಣೆಯು ಕಡಿಮೆ. ಶಾಲಾ, ಕಾಲೇಜುಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಪ್ಯಾನಲ್‌ಗಳನ್ನು ವಿವಿಧ ಆ್ಯಂಗಲ್‌ಗಳಲ್ಲಿ ಕೂಡಿಸುವುದು ಸಹ ಅಷ್ಟೇ ಮಹತ್ವದ್ದು, ಇದುವರೆಗೂ 1.25 ಲಕ್ಷ ಜನ ಸೌರ ಫಲಕಗಳನ್ನು ಅಳವಡಿಸಿಕೊಂಡಿದ್ದಾರೆ. ವಿವಿಧ ಕಿಲೋವ್ಯಾಟ್‌ಗೆ ಬೇರೆ ಬೇರೆ ತರಹದ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳಬೇಕಾತ್ತದೆ ಎಂದು ಕೇಳುಗರರೊಂದಿಗೆ ಬಾಲಚಂದ್ರ ಬಾ. ಜಾಬಶೆಟ್ಟಿ ಸಂವಾದ ನಡೆಸಿದರು. 

ಜೆ.ಎಸ್‌.ಎಸ್‌. ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ. ಟಿ. ಎಮ್ ಶ್ರೀಧರ ಅಧ್ಯಕ್ಷತೆ ವಹಿಸಿ, ಸೂರ್ಯ ಭೂಮಿಯ ಹತ್ತಿರದ ನಕ್ಷತ್ರ. ಪ್ರತ್ಯಕ್ಷ ದೇವರು. ಭೂಮಿಯ ವಿಕಾಸಕ್ಕೆ, ಸಕಲ ಜೀವಿಗಳಿಗೆ ಆಧಾರ. ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯ (ಎನರ್ಜಿ) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರಿ​‍್ಡಸಿ ಪಡೆಯುವುದೇ ಸೌರಶಕ್ತಿ. ಇಂತಹ ಸೌರಶಕ್ತಿಯನ್ನು ನಾವು ಬಳಸಿಕೊಂಡಾಗ ಆರ್ಥಿಕವಾಗಿ ಸದೃಢರಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ವಿಜ್ಞಾನ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ ವಂದಿಸಿದರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಬಿ.ಎಲ್‌. ಪಾಟೀಲ, ಟಿ.ಎಸ್‌. ಕ್ವಾಟಿಹಳ್ಳಿ, ಶಿವಲಿಂಗಪ್ಪ ಮಾಸ್ತಮರಡಿ, ಮಹಾಂತೇಶ ನರೇಗಲ್, ಮಧುಮತಿ ಸಣಕಲ್, ಬಸವರಾಜ ಕಪಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.