ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಕಟಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪುಸ್ತಕಗಳನ್ನು ಲೋಕಾರೆ​‍್ಣ

Freedom fighter Sanguru Kariappa books published by Hampi Kannada Vishwa Vidyalaya

ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಕಟಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪುಸ್ತಕಗಳನ್ನು ಲೋಕಾರೆ​‍್ಣ

ಹಾವೇರಿ 20 :ದೇಶದ ಸ್ವಾತಂತ್ರ್ಯಕ್ಕಾಗಿ ವಿರೋಚಿತವಾಗಿ ಹೋರಾಡಿದವರಲ್ಲಿ ಕರಿಯಪ್ಪ ಯರೇಶೀಮಿ ಹಾಗೂ ವೀರಮ್ಮ ಯರೇಶೀಮಿ ಅತ್ಯಂತ ಪ್ರಮುಖರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಗಾಥೆಯನ್ನು ಪ್ರತಿಯೋರ್ವರೂ ಅರಿಯಬೇಕು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡೀನ್ ಡಾ. ಎಫ್‌.ಟಿ ಹಳ್ಳಿಕೇರಿ ಅಭಿಪ್ರಾಯಪಟ್ಟರು.    ನಗರದ ಡಾ. ಮಹದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಸ್ಮಾರಕ ಟ್ರಸ್ಟ್‌ (ರಿ) ಹಾವೇರಿ ಆಯೋಜಿಸಿದ್ದ, ಟ್ರಸ್ಟ್‌ ಪ್ರಕಟಿಸಿದ ಸ್ವಾತಂತ್ರ್ಯ ಸಿಂಹ ಕರಿಯಪ್ಪ ಯರೇಶೀಮಿ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಕಟಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪುಸ್ತಕಗಳನ್ನು ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು.     ಮಹಾತ್ಮ ಗಾಂಧೀಜಿ ಅವರ ಅನುಯಾಯಿಯಾಗಿದ್ದುಕೊಂಡು ಕರಿಯಪ್ಪ ಅವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಸಮರದಲ್ಲಿ ನಾಡಬಾಂಬ್ ತಯಾರಿಸುವಾಗ ಸ್ಪೋಟಗೊಂಡು ಬಲಗೈ ಮುಂಗೈಕಳೆದುಕೊಂಡರೂ ಆಂಗ್ಲರ ವಿರುದ್ಧ ಜೀವಮಾನವೀಡೀ ಹೋರಾಡಿದ ಕರಿಯಪ್ಪ ಅವರು ನಮ್ಮ ನಾಡಿನ ಮಹಾನ್ ಚೇತನ ಎಂದು ಬಣ್ಣಿಸಿದರು.    ಲೇಖಕ ಲಿಂಗದಹಳ್ಳಿ ಹಾಲಪ್ಪ ಮಾತನಾಡಿ ಕರಿಯಪ್ಪ ಯರೇಶೀಮಿ ಅವರು ಅತ್ಯಂತ ಬಡತನದಲ್ಲಿಯೇ ಬಾಲ್ಯವನ್ನು ಕಳೆದರು.ಸಹೋದರರ ಸಹಕಾರದೊಂದಿಗೆ ಹಾಗೂ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮಕಿ ಭಾರತ ದೇಶ ಎಂದೂ ಮರೆಯದ ಮಹಾನ್ ಸ್ವಾತಂತ್ರ್ಯ ಸೇನಾನಿಯಾದರು.ಮಹಾತ್ಮ ಗಾಂಧೀಜಿಯವರ ಆಣತಿಯಂತೆ ಗಾಂಧೀಜಿ-ಕಸ್ತೂರಬಾ ಅವರ ಸಾಕು ಮಗಳಾದ ದಲಿತ ಸಮುದಾಯದ ವೀರಮ್ಮ ಅವರನ್ನು ಅಂತರ್ಜಾತಿ ವಿವಾಹವಾದರು.ಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಅಂತರ್ಜಾತಿ ವಿವಾಹವಾದ ಪರಿಣಾಮವಾಗಿ ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಯವರಿಂದ ಸಾಕಷ್ಟು ನೋವು ಅವಮಾನಗಳನ್ನು ಅನುಭವಿಸಿದರು.  

ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರು ಹಾಗೂ ಶಾಸಕರಾದ ಬಸವರಾಜ ಶಿವಣ್ಣನವರ ಮಾತನಾಡಿ ಟ್ರಸ್ಟ್‌ ಪದಾಧಿಕಾರಿಗಳ ಆಶಯದಂತೆ ಹಾವೇರಿ ನಗರದಲ್ಲಿರುವ ಜಿಲ್ಲಾ ಕೆಂದ್ರ ಬಸ್ ನಿಲ್ದಾಣಕ್ಕೆ ಸಂಗೂರು ಕರಿಯಪ್ಪ ವೀರಮ್ಮ ದಂಪತಿಗಳ ಹೆಸರಿನಲ್ಲಿ ನಾಮಕರಣ ಮಾಡಲು ಸರಕಾರದ ಮಟ್ಟದಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿದ್ದು ಶೀಘ್ರದಲ್ಲಿಯೇ ಈ ಪ್ರಕ್ರೀಯೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.  

ಸನ್ಮಾನ: ಕಾರ್ಯಕ್ರಮದಲ್ಲಿ ಡಾ. ಎಫ್‌.ಟಿ ಹಳ್ಳಿಕೇರಿ, ಡಾ. ಲಿಂಗದಹಳ್ಳಿ ಹಾಲಪ್ಪ, ಯಶೋಧಮ್ಮ ಯರೇಶೀಮಿ (ಅಮೇರಿಕಾ),ಚಿಕ್ಕಮ್ಮ ದು. ಆಡೂರು,ಶ್ರೀಮತಿ ನಿಶಾ (ಅಮೇರಿಕಾ),ವತ್ಸಲ್ (ಅಮೇರಿಕಾ), ಹೇಮಲತಾ ಕೂರಗುಂದ, ಮೃತ್ಯಂಜಯ ಫ ಕುಲಕರ್ಣಿ,ಕುಮಾರ್ ಎನ್‌.ಜಿ ಅವರನ್ನು ಸನ್ಮಾನಿಸಲಾಯಿತು.ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿದರು. ಎಫ್‌.ಎನ್ ಗೊರವರ ಸ್ವಾತಂತ್ರ್ಯ ಸಮರದ ಲಾವಣಿ ಹಾಡಿದರು.    ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ಟ್ರಸ್ಟ್‌ ಅಧ್ಯಕ್ಷರಾದ ಎಸ್‌ಎಫ್‌ಎನ್  ಗಾಜಿಗೌಡರ ವಹಿಸಿದ್ದರು.ಪ್ರಾಸ್ತಾವಿಕವಾಗಿ ಟ್ರಸ್ಟ್‌ ಸದಸ್ಯರಾದ ಬಸವರಾಜ ಪೂಜಾರ ಮಾತನಾಡಿದರು.ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ,ಸಾಹಿತಿಗಳಾದ ಸತೀಶ ಕುಲಕರ್ಣಿ,ಸಂಕಮ್ಮ ಸಂಕಣ್ಣನವರ, ಡಾ.ಮೋಹನ್ ಹಂಡೆ, ಅಶೋಕ ನಡಕಟ್ಟಿನ, ಅಬ್ದುಲ್ ಹುಬ್ಬಳ್ಳಿ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮಂಜುನಾಥ ಚ. ಗಾಜಿ ನಿರ್ವಹಿಸಿದರು. ಶಶಿಕಲಾ ಜಿ. ಕಣಿವೇರ ಸ್ವಾಗತಿಸಿದರು. ಶ್ರೀನಿವಾಸ ಯರೇಶೀಮಿ ವಂದಿಸಿದರು.