ಜನಪದ ಕಲೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಗತ್ಯ: ಪೋಲಿಸ್ ಪಾಟೀಲ
ತಾಳಿಕೋಟಿ: ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಲಾವಣಿ ಜನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮವು ಸಾಹಿತ್ಯ ಅಕಾಡೆಮಿ ಮತ್ತು ಎಸ್.ಎಸ್.ವಿದ್ಯಾ ಸಂಸ್ಥೆ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಜೆ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಸಿ ಸಂಪನ್ಮೂಲ ವ್ಯಕ್ತಿ, ಕವಿ ರಂಗಕರ್ಮಿ ಮತ್ತು ಲಾವಣಿ ತತ್ವಪದಕಾರ ಬಿ.ಆರ್.ಪೋಲಿಸ್ ಪಾಟೀಲ ಅವರು ಮಾತನಾಡಿ ನಮ್ಮ ನಾಡಿನ ಶ್ರೀಮಂತ ಪರಂಪರೆಯಾದ ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದಂತೆ ನಮ್ಮ ಜನಪದ ಸಂಪ್ರದಾಯಗಳು ಜನರ ಮನಸ್ಸಿನಿಂದ ಮಸುಕಾಗುತ್ತಿವೆ. ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿದ್ದು ಅವು ನಮ್ಮನ್ನು ಜೀವನ್ಮುಖಿಯನ್ನಾಗಿ ಮಾಡುತ್ತವೆ. ಬದುಕನ್ನು ಸ್ವಸ್ಥಗೊಳಿಸಲು ಮನುಷ್ಯನಿಗೆ ಇರಬೇಕಾದ ಹವ್ಯಾಸಗಳಲ್ಲಿ ಜನಪದ ಕಲೆಯ ಆಸ್ವಾದನೆಯು ಒಂದು ಎಂದರು. ಅತಿಥಿಗಳಾಗಿ ಆಗಮಿಸಿದ ಜೆ.ಎಸ್.ಜಿ.ಫೌಂಡೇಶನ್ ನಿರ್ದೇಶಕ ಶ್ರೀಕಾಂತ ಪತ್ತಾರ ಅವರು ಮಾತನಾಡಿ ಜನಪದ ಕಲೆಗಳನ್ನು ಸಾಹಿತಿ ಬಿ.ಆರ್. ಪೊಲೀಸ್ ಪಾಟೀಲರ ಹಾಗೆ ಅನೇಕರು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದ್ದಾರೆ. ಅವರ ಈ ಕಾರ್ಯಗಳನ್ನು ಸಮಾಜ ನೆನೆಯಬೇಕಾಗುತ್ತದೆ ಎಂದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಎಲ್. ಕೊಪ್ಪದ ಮಾತನಾಡಿ ಜನಪದ ಲಾವಣಿಗಳು ನಮ್ಮ ನಾಡಿನ ವಿಶಿಷ್ಟ ಪರಂಪರೆಯನ್ನು ಬಿತ್ತರಿಸುತ್ತವೆ.ಅಂತವುಗಳನ್ನು ನಾವು ನೀವೆಲ್ಲ ಜತನವಾಗಿ ಕಾಯ್ದುಕೊಂಡು ಹೋಗಬೇಕಾದಂತ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಆ ಕಾರ್ಯದಲ್ಲಿ ಶ್ರೀ ಬಿ.ಆರ್. ಪೊಲೀಸ್ ಪಾಟೀಲ್ ಅವರು ಮುಂಚೂಣಿಯಲ್ಲಿದ್ದಾರೆ. ನಾವು ನೀವು ಕೂಡ ಅವರು ನಡೆದ ದಾರಿಯಲ್ಲಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್. ಪಾಟೀಲರು ವಿದ್ಯಾರ್ಥಿಗಳು ಲಾವಣಿ ಹಾಡುಗಳನ್ನು ಕಲಿತು ಹಾಡಬೇಕು. ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿ ಬಿ.ಆರ್. ಪೊಲೀಸ್ ಪಾಟೀಲ ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಲಾವಣಿ ಗೀತೆಗಳು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಲಾವಣಿ ಹಾಡುಗಳನ್ನು ಕಲಿಯುವವರಿಗೆ ತರಬೇತಿ ಕೊಡಿಸುವಂತಹ ಕೆಲಸವನ್ನು ನಾವು ಸಂಸ್ಥೆಯ ವತಿಯಿಂದ ಮಾಡುತ್ತೇವೆ ಎಂದರು. ಕನ್ನಡ ಸಲಹಾ ಮಂಡಳಿ ಸಾಹಿತ್ಯ ಅಕಾಡೆಮಿ ಹೊಸದೆಹಲಿ ಸದಸ್ಯ ಚೆನ್ನಪ್ಪ ಅಂಗಡಿ ಪ್ರಸ್ತಾವಿಕವಾಗಿ ಮಾತನಾ ಡಿದರು.ಕಾರ್ಯಕ್ರಮದಲ್ಲಿ ಆಸಕ್ತ ನಾಗರಿಕರು,ಶಿಕ್ಷಕರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಶಿಕ್ಷಕ ಎಸ್.ಸಿ.ಗುಡಗುಂಟಿ ಸ್ವಾಗತಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿದರು. ಎಸ್.ವ್ಹಿ.ಜಾಮಗೊಂಡಿ ವಂದಿಸಿದರು.