ಬಳ್ಳಾರಿಯಲಿ ಚಿಲ್ಲಿ ಮಾರುಕಟ್ಟೆ ಎಪಿಎಂಸಿಯಿಂದ ಐದು ಕೋಟಿ ರೂ. -ಸಚಿವ ಶಿವಾನಂದ ಪಾಟೀಲ ಭರವಸೆ

Five crore rupees from APMC in Bellary Chili Market. - Minister Sivananda Patil promised

ಬಳ್ಳಾರಿಯಲಿ ಚಿಲ್ಲಿ ಮಾರುಕಟ್ಟೆ ಎಪಿಎಂಸಿಯಿಂದ ಐದು ಕೋಟಿ ರೂ. -ಸಚಿವ ಶಿವಾನಂದ ಪಾಟೀಲ ಭರವಸೆ 

ಬಳ್ಳಾರಿ 17:ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿರುವ ಬಳ್ಳಾರಿ ಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಕೋಲ್ಡ್‌ ಸ್ಟೋರೇಜ್ ಜತೆಗೆ ಚಿಲ್ಲಿ ಮಾರುಕಟ್ಟೆಯನ್ನೂ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿಯಿಂದ ಐದು ಕೋಟಿ ರೂ. ಅನುದಾನ ನೀಡಲಿದ್ದು, ಇತರ ಮೂಲಗಳಿಂದ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು. ಶಾಸಕ ನಾರಾ ಭರತ್‌ರೆಡ್ಡಿ ಅವರೂ ನೆರವಿನ ಭರವಸೆ ನೀಡಿದ್ದಾರೆ ಎಂದರು. 

ಈಗ ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಗುರುತಿಸಿರುವ 23 ಎಕರೆ ಪ್ರದೇಶ ಕಡಿಮೆಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಕನಿಷ್ಟ 50 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. 

ಪಿಪಿಪಿ ಮಾಡೆಲ್‌ನಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣ ಕಷ್ಟ ಸಾಧ್ಯ. ಹೀಗಾಗಿ ಈ ಯೋಜನೆ ಬದಲಿಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಮಾಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ಎಪಿಎಂಸಿ ಸಚಿವನಾಗಿ ಈ ಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆಯನ್ನು ನಿರ್ಮಾಣ ಮಾಡುವೆ ಎಂದು ಹೇಳಿದರು. 

ಮಾರುಕಟ್ಟೆ ಶುಲ್ಕ ವಿನಾಯಿತಿ ಬೇಡಿಕೆ ಇಡಬೇಡಿ; ಕಳೆದ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಪೂರ್ವದಲ್ಲಿ ವಾರ್ಷೀಕ ಸುಮಾರು 600ರಿಂದ 680ಕೋಟಿ ರೂ. ಆದಾಯ ಇತ್ತು . ಕಾಯ್ದೆ ತಿದ್ದುಪಡಿ ನಂತರ ಆದಾಯ 180 ಕೋಟಿ ರೂ.ಗಳಿಗೆ ಕುಸಿಯಿತು. ನಮ್ಮ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಎಪಿಎಂಸಿ ಕಾಯ್ದೆಯನ್ನು ಮರು ಸ್ಥಾಪನೆ ಮಾಡಿದ ನಂತರ ಆದಾಯದಲ್ಲಿ ಏರಿಕೆಯಾಗಿದ್ದು, ಈ ವರ್ಷ ಸುಮಾರು 450 ಕೋಟಿ ರೂ. ಸಂಗ್ರಹವಾಗುವ ವಿಶ್ವಾಸ ಇದೆ. ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೂ ಅನುಕೂಲವಾಗಿದೆ ಎಂದರು. 

ರಾಜ್ಯದಲ್ಲಿ ಎಪಿಎಂಸಿ ಸುಮಾರು 23 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ. ಈ ಆಸ್ತಿಯನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ. ಆರ್ಥಿಕವಾಗಿ ಮತ್ತಷ್ಟು ಬಲಶಾಲಿಯಾಗಿ ಮಾಡಬೇಕಿದೆ. ಲಾಭ ಮಾಡುವ ಉದ್ದೇಶ ಅಲ್ಲದಿದ್ದರೂ ಆರ್ಥಿಕವಾಗಿ ಸಬಲ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಎಪಿಎಂಸಿಯಲ್ಲಿ ತೆರಿಗೆ ವಸತಿ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ ರಾಜ್ಯಕ್ಕೆ ಮಾದರಿಯಾದ ಕೆಲಸ ಮಾಡಿದೆ. ಈ ಯೋಜನೆಯನ್ನು ಎಲ್ಲ ಎಪಿಎಂಸಿಗಳಲ್ಲಿ ವಾಣಿಜ್ಯೋದ್ಯಮ ಸಂಸ್ಥೆಗಳ ಸಹಕಾರದೊಂದಿಗೆ ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ. ಈ ಯೋಜನೆ ರೈತರಿಗೆ ತುಂಬಾ ಅನುಕೂಲಕರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಧಿಕ ಕೋಲ್ಡ್‌ ಸ್ಟೋರೇಜ್ ಇವೆ. ಹಾಗಾಗಿ ಸರ್ಕಾರದಿಂದ ನಿರ್ಮಾಣ ಮಾಡುವುದು ಬೇಡ ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಖಾಸಗಿ ಕೋಲ್ಡ್‌ ಸ್ಫೋರೇಜ್‌ಗಳ ಮಾಲೀಕರು ರೈತರನ್ನು ಶೋಷಣೆ ಮಾಡುವ ಸಾಧ್ಯತೆ ಇರುತ್ತದೆ. ಸಹಕಾರಿ ತತ್ವ ಅಥವಾ ಸರಕಾರದಿಂದಲೂ ನಿರ್ಮಾಣ ಮಾಡಿದರೆ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಜಯಪುರದಲ್ಲಿ ಸಹಕಾರಿ ತತ್ವದ ಮೇಲೆ ಕೋಲ್ಡ್‌ ಸ್ಟೋರೇಜ್ ನಿರ್ಮಾಣ ಮಾಡಲಾಗಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು. 

ಎಪಿಎಂಸಿ ಬಳಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಡಳಿತ ಭವನ ನಿರ್ಮಿಸಲು ಅಗತ್ಯ ನಿವೇಶನ ಒದಗಿಸಲಾಗುವುದು. ಯಾವುದೇ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದ್ದರೆ ಪ್ರೋತ್ಸಾಹ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಶಾಸಕ ನಾರಾ ಭರತ್‌ರೆಡ್ಡಿ ಅವರು ಮಾತನಾಡಿ, ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಕೈ ಜೋಡಿಸಲಾಗುವುದು. ಸಂಸ್ಥೆಯ ಇತರ ಬೇಡಿಕೆಗಳ ಈಡೇರಿಕೆಗೂ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. 

ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಸಂಸ್ಥೆ ಆಡಳಿತ ಭವನ ನಿರ್ಮಾಣಕ್ಕೆ ಎಪಿಎಂಸಿ ಆವರಣದಲ್ಲಿ ನಿವೇಶನ ನೀಡಬೇಕು. ಬಹು ದಿನಗಳ ಬೇಡಿಕೆಯಾಗಿರುವ ಚಿಲ್ಲಿ ಮಾರುಕಟ್ಟೆಯನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕು. ಈಗಾಗಲೇ ನಿವೇಶನ ಗುರುತು ಮಾಡಿರುವುದರಿಂದ ಸಮಸ್ಯೆ ಇಲ್ಲ ಎಂದು ಹೇಳಿದರು. 

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಕೆ.ಸಿ. ಸುರೇಶ್‌ಬಾಬು, ಉಪಾಧ್ಯಕ್ಷರಾದ ಮಂಜುನಾಥ್ ಎ. ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ಮಚಂರ್ಟ್ ಮಲ್ಲಿಕಾರ್ಜುನ್, ಚೇರ್ಮನ್ ಪಿ. ಶ್ರೀನಿವಾಸ ರಾವ್, ಪಿ.ಎ. ರಾಜಶೇಖರ್, ಸಿ. ಶ್ರೀನಿವಾಸ ರಾವ್ ಟನ್ ಅಸೋಸಿಯೇಷನ್, ರೈಸ್‌ಮಿಲ್ ಅಸೋಸಿಯೇಷನ್, ಎಪಿಎಂಸಿ ಕಮಿಷನ್ ಏಜಂಟ್ಸ್‌ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.