ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ಸು
ವಿಜಯಪುರ ಮಾ.07 : ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮೊಣಕಾಲು ಮತ್ತು ಚಪ್ಪೆಯ ಎಲುಬು ಮರು ಜೋಡಣಾ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಬೆಳಗಾವಿಯ ವೈದ್ಯಕೀಯ ಸಹ ಪ್ರಾಧ್ಯಾಪಕರಾದ ಡಾ.ಸತೀಶ ನೇಸರಿ ಇವರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಎಲುಬು-ಕೀಲು ತಜ್ಞ ವೈದ್ಯರಾದ ಡಾ.ಎಸ್.ನಾಗಠಾಣ, ಡಾ.ಎಸ್.ವಿ.ಹಾವಿನಾಳ, ಡಾ.ಜಿಲಾನಿ ಬಾಷಾ, ಡಾ.ಆನಂದ ಮೇತ್ರಿ ಹಾಗೂ ಅರವಳಿಕೆ ತಜ್ಞರಾದ ಡಾ.ಸಂದೀಪ ಸಜ್ಜನ, ಮಹಾ ಶಸ್ತ್ರಚಿಕಿತ್ಸೆಯ ವಿಭಾಗದ ಉಸ್ತುವಾರಿಗಳಾದ ಶ್ರೀಮತಿ ಕಾಶಿಬಾಯಿ ಬಡಿಗೇರ, ಶ್ರೀಮತಿ ಕಸ್ತೂರಿ ನಡುವಿನಮನೆ, ಶ್ರೀಮತಿ ಸುಮಿತ್ರಾ ರಾಮಕೃಷ್ಣ ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗ ಈ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಶ್ರಮವಹಿಸಿದ್ದಾರೆ. ಸ್ಥಳೀಯ ವೈದ್ಯಾಧಿಕಾರಿಯಾದ ಡಾ.ಚಂದು ರಾಠೋಡ, ಎಬಿಎಆರ್‌ಕೆ ನೋಡಲ್ ಅಧಿಕಾರಿಗಳಾದ ಡಾ.ಎ.ಜಿ.ಬಿರಾದಾರ ಜಿಲ್ಲಾ ಸಂಯೋಜಕರಾದ ಡಾ.ಸತೀಶ ಶಿರೋಳ ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಂದಾಜು ರೂ.2 ಲಕ್ಷ ವೆಚ್ಚವಾಗುತ್ತದೆ. ಇಂತಹ ಕಠಿಣ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಹಕಾರದಿಂದ ಸಾಧ್ಯವಾಗಿಸಲಾಗಿದೆ. ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲು ವಿಜಯಪುರ ಜಿಲ್ಲಾ ಆಸ್ಪತ್ರೆಯನ್ನು ರಾಜ್ಯದ ಇಲಾಖೆಯ ಅತ್ಯುನ್ನತ ಸಮಿತಿ ಆಯ್ಕೆ ಮಾಡಿದ್ದು ಇದರ ಸದುಪಯೋಗ ಪಡೆಯಲು ಹಾಗೂ ಸಂಧಿವಾತ, ವಯಸ್ಸಿಗೆ ಸಂಬಂಧಿಸಿದ ಕೀಲುಗಳ ಕ್ಷೀಣತೆ, ಗಾಯಗಳ ಹರಡುವಿಕೆಯಿಂದ ಮೊಣಕಾಲು ಚಿಪ್ಪೆಯ ಕೀಲು ಬದಲಿಗಾಗಿ 180042558330 ಅಥವಾ 14555 ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ವೈದ್ಯರು ಹಾಗೂ ಸಿಬ್ಬಂದಿಗೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.