ಕಾರವಾರ 01: ಕರಾವಳಿ ಉತ್ಸವ -2018 ಡಿಸೆಂಬರ್ 8 ರಿಂದ 10ರವರೆಗೆ ನಡೆಯಲಿದ್ದು, ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರ ಸಮ್ಮುಖದಲ್ಲಿ ಶನಿವಾರ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿದ ಅವರು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಉತ್ಸವ ಮಾಡಲಾಗುತ್ತಿದೆ. ದೇಶ ವಿದೇಶಗಳ ಪ್ರವಾಸಿಗರನ್ನು ಆಕಷರ್ಿಸಲು, ಸಾಹಸಿ ಪ್ರವಾಸೋದ್ಯಮ ಕಾರವಾರ ಹಾಗೂ ಮುರುಡೇಶ್ವರದಲ್ಲಿ ಪ್ರಾರಂಭವಾಗಿದೆ ಎಂಬ ಸಂದೇಶವನ್ನು ಹೊರಜಗತ್ತಿಗೆ ತಲುಪಿಸಲು ಉತ್ಸವ ಆಯೋಜಿಸಲಾಗುತ್ತಿದೆ. ಬೀಚ್ ಮ್ಯಾರಥಾನ್ ಮತ್ತು ಹೆಲಿಕಾಪ್ಟರ್ ಸುತ್ತಾಟ ಈ ಸಲದ ಪ್ರಮುಖ ಆಕರ್ಷಣೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮೊದಲ ದಿನ ಸ್ಟಾರ್ ಗಾಯಕ ಅಭಿಜಿತ್ ಸಾವಂತ, ಎರಡನೇ ದಿನ ರಘು ದೀಕ್ಷಿತ್ ಹಾಗೂ ಕೊನೆಯ ದಿನ ಹಿಂದಿ ಚಲನಚಿತ್ರ ಗಾಯಕಿ ನೀತಿ ಮೋಹನ್ ಹಾಡಿ ರಂಜಿಸಲಿದ್ದಾರೆ ಎಂದರು. ಈ ಸಲ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾರವಾರದವರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಹಾಗೂ ಜಿಲ್ಲೆಯ ವಿವಿಧ ಯುವಕರಿಗೆ , ಕಲಾ ತಂಡಗಳಿಗೆ ನೃತ್ಯ ಮತ್ತು ಹಾಡುಗಾರರಿಗೆ, ಚಲನಚಿತ್ರ ಗೀತೆ ಹಾಡುವ ಆಕ್ರೆಸ್ಟ್ರಾ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂಧ ಕಲಾವಿದನಿಗೆ ಹಾಗೂ ಆಶಾ ನಿಕೇತನಕದ ಮೂಕ ಮಕ್ಕಳ ನೃತ್ಯಕ್ಕೂ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧ ಭಾಗದ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ರಾಷ್ಟ್ರಮಟ್ಟದ ಕಲಾವಿದರಿಗೆ ಅವಕಾಶ:
ವಚನ ಹಾಗೂ ಸೂಫಿ ಹಾಡುಗಳನ್ನು ಹಾಡುವ ರಾಷ್ಟ್ರ ಮಟ್ಟದ ಗಾಯಕಿ ಡಾ.ಜಯದೇವಿ ಜಂಗಮಶೆಟ್ಟಿ ಅವರಿಗೆ ಮುಖ್ಯವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಅಂಧ ಕಲಾವಿದ ಅನಿಲ್ ನಾಯ್ಕ, ಗಾಯಕ ಸೃಜನ್ ಕಾಮತ್, ಮಾಧವ ಎಸ್.ನಾಯ್ಕ ಹಾಡಲಿದ್ದಾರೆ. ಶಿರಸಿಯ ಶ್ರೀಲಕ್ಷ್ಮಿ ಹೆಗಡೆ ಹಿಂದೂಸ್ತಾನಿ ಹಾಗೂ ಸುಗಮ ಸಂಗೀತ ಹಾಡಲಿದ್ದರೆ, ಶಿರಸಿ ಅನುರಾಧ ಹೆಗಡೆ ಭರತನಾಟ್ಯ ಮಾಡಲಿದ್ದಾಳೆ. ಸೌತ್ ಝೋನ್ ಕಲ್ಚರಲ್ ಸೆಂಟರ್ನವರು ನೃತ್ಯ ಕಾರ್ಯಕ್ರಮ ಉತ್ಸವದ ಮೂರು ದಿನ ಮುಖ್ಯ ವೇದಿಕೆಯಲ್ಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಹೊನ್ನಾವರದ ಓಶನ್ ಹಾರ್ಟ ಬ್ರೇಕರ್ಸ ಕಲಾವಿದರು, ಬೆಂಗಳೂರಿನ ಸಂಧ್ಯಾ ಅವರಿಂದ ಮೋಹನಿ ಅಟ್ಟಾಂ ನೃತ್ಯ , ನಾಂಗೇದ್ರ ಕುಮಟಾ ಅವರಿಂದ ಸುಗಮ ಸಂಗೀತ,ಝೇಂಕಾರ್ ಮೆಲೋಡಿಯಸ್ ನಿಂದ ಆಕ್ರೆಸ್ಟ್ರಾ, ಜುಲಿಯಾನ ಸಿದ್ದಿ ತಂಡದಿಂದ ಡುಮಾಮಿ ನೃತ್ಯ, ಕಿನ್ನರದ ಕಲಾವಿದರಿಂದ ಗುಮಟೆ ಪಾಂಗ್ ನಡೆಯಲಿದೆ. ಗಾಯಕಿ ದೀಪ್ತಿ ಅಗರ್ೇಕರ್ ಹಾಗೂ ಮೀನಾಕ್ಷಿ ಪಾಟೀಲ ಅವರಿಂದ ಗಾಯನ ಜಿಲ್ಲಾ ರಂಗಮಂದಿರದ ವೇದಿಕೆಯಲ್ಲಿದೆ. ಕಾರವಾರ ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ಸಹ ವಾದ್ಯ ಸಂಗೀತವಿದೆ. ಹುಬ್ಬಳ್ಳಿಯ ಸುಜಾತ ರಾಜಗೋಪಾಲ ಅವರಿಂದ ಭರತನಾಟ್ಯ ಪ್ರದರ್ಶನ ಮಯೂರ ವರ್ಮ ವೇದಿಕೆಯಲ್ಲಿದೆ. ಕೊನೆಯ ದಿನ ನೇವಿ ಬ್ಯಾಂಡ ಅವರಿಂದ ಸಂಗೀತ ವಾದ್ಯ ನುಡಿಸುವ ಕಾರ್ಯಕ್ರಮವಿದೆ. ಮೊದಲ ದಿನ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ ಎಂದರು. ಶಾಸಕಿ ರೂಪಾಲಿ ನಾಯ್ಕ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸ್ಕೃತಿ ಸಚಿವೆ ಜಯಮಾಲ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಉತ್ಸವಕ್ಕೆ ಕರೆಸಲು ಪ್ರಯತ್ನಿಸಲಾಗುವುದು ಎಂದರು. ಎಸ್ಪಿ ವಿನಾಯಕ ಪಾಟೀಲ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಇದ್ದರು.