ಭಯ ಇಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್
ಬಳ್ಳಾರಿ 06: ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಒಂದು ಮಹತ್ವದ ಘಟ್ಟವಾಗಿದ್ದು, ಮಕ್ಕಳು ಪರೀಕ್ಷೆಯ ಬಗ್ಗೆ ಗೊಂದಲ, ಭಯ ಇಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.
ಕುರುಗೋಡು ತಾಪಂ, ಬಾದನಹಟ್ಟಿ ಗ್ರಾಪಂ ಇವರ ಆಶ್ರಯದಲ್ಲಿ ಬಾದನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರದಂದು 2024-25ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ, ಸಾಕಷ್ಟು ಅನುದಾನ ಮತ್ತು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಶಿಕ್ಷಕರು ಮಕ್ಕಳನ್ನು ಸಮರ್ಥವಾಗಿ ಹಾಗೂ ಸಮರ್ಕವಾಗಿ ಪರೀಕ್ಷೆಗಳನ್ನು ಎದುರಿಸಲು ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ತಿಳಿಸಿದರು.ಶಿಕ್ಷಕರು ಶಾಲೆಯ ಪ್ರತಿ ಮಗುವನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣಬೇಕು. ಮಕ್ಕಳ ಮೂಲಭೂತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವ, ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ ಎಂದರು.ಶೈಕ್ಷಣಿಕವಾಗಿ ಬೆಳೆಯಲು ಪ್ರಾಥಮಿಕ ಹಂತದಿಂದ ಪ್ರತಿ ಮಗು ಉತ್ತಮ ಓದು ಬರಹ ಕಲಿಯಬೇಕು. ಅಂದಾಗ ಮಾತ್ರ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಹತ್ತನೇಯ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು ತಮ್ಮ ಆತಂಕ, ಆಕಾಂಕ್ಷೆ-ಗೊಂದಲಗಳ ಕುರಿತು ಜಿಪಂ ಸಿಇಒ ಅವರೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಕೆ.ವಿ.ನಿರ್ಮಲ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ತಾಲ್ಲೂಕು ಯೋಜನಾಧಿಕಾರಿ ರಾಧಿಕ, ಪಂಚಾಯತ್ ರಾಜ್ ಅಭಿವೃದ್ಧಿಯ ಸಹಾಯಕ ನಿರ್ದೇಶಕ ಅನೀಲ್ ಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ನರೇಗಾ ಸಿಬ್ಬಂದಿಯವರು ಹಾಗೂ ತಾಲ್ಲೂಕು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.