ಮೈಸೂರಿನಲ್ಲಿ ಕನ್ನಡ‌ ಶಾಸ್ತ್ರೀಯ ಭಾಷಾ ಅಧ್ಯಯನ‌ ಕೇಂದ್ರ ಸ್ಥಾಪನೆ:ಸಚಿವ ಸಿ.ಟಿ.ರವಿ

ಬೆಂಗಳೂರು ,ಫೆ‌ 4 -ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಮೈಸೂರಿನಲ್ಲಿ ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ 3 ಎಕರೆ ಜಾಗವನ್ನು ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಕ್ಕಾಗಿ ಗುರುತಿಸಲಾಗಿದೆ. ಈ ಜಾಗದಲ್ಲಿಯೇ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ ಎಂದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ಥಾಪನೆಗೆ ಬೇಕಾದ ಸಮಗ್ರ ಯೋಜನಾ ವರದಿ(ಡಿಪಿಆರ್)ಯ ಕರಡು ಸಿದ್ಧವಾಗಿದೆ. ಶಾಸ್ತ್ರೀಯ ಕೇಂದ್ರಕ್ಕೆ ಬೇಕಿರುವ ಅಗತ್ಯ ದಾಖಲಾತಿಗಳನ್ನು ಕೇಂದ್ರ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿ, 10 ದಿನದೊಳಗೆ ಅನುಮತಿ ಪಡೆಯಲಾಗುವುದು ಎಂದು ವಿವರ ನೀಡಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕಾರಗೊಳ್ಳುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಕೊರತೆ ಇಲ್ಲ. ಜಿಲ್ಲಾಡಳಿತಕ್ಕೆ ಈಗಾಗಲೇ 10 ಕೋಟಿ ರೂ. ವಿಶೇಷಾನುದಾನ ನೀಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ 1 ಕೋಟಿ ರೂ. ನೀಡಿದೆ. ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದಾರೆ. ಇದು ಸುಮಾರು 3 ಕೋಟಿ ರೂ. ಆಗಲಿದೆ. ಹಾಗೆಯೇ ವಿವಿಧ ಸಂಘಸಂಸ್ಥೆಗಳು ಸಹಕಾರ ನೀಡಿವೆ. ಅನುದಾನದ ಕೊರತೆ ಇಲ್ಲ ಎಂದರು.

ಕನ್ನಡ ಭಾಷಾ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶದ ನೀಡಿದೆ. ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆ ಪಾಲಕ-ಪೋಷಕರಿಗೆ ಬಿಟ್ಟಿದ್ದಾಗಿದೆ. ಇಂಗ್ಲೀಷ್ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣದ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿಬೇಕೇ ಅಥವಾ ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೇ ಎಂಬ ಬಗ್ಗೆ ತಿರ್ಮಾನಿಸಬೇಕು. ಕನ್ನಡ ಭಾಷೆ ಉಳಿಸುವ ಸಂಬಂಧ ಸಾಹಿತಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಇಂಗ್ಲೀಷ್  ಮಾಧ್ಯಮದಿಂದಾಗಿ ಕನ್ನಡದಂತೆಯೇ ಹಿಂದಿ, ತಮಿಳು, ಮಲೆಯಾಳಿ, ತೆಲಗು ಮೊದಲಾದ ಮಾಧ್ಯಮಗಳ ಶಾಲೆಯು ಅಪಾಯ ಎದುರಿಸುತ್ತಿವೆ. ದೇಶಿ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳಿಂದ ನಮಗೆ ಸವಾಲಿಲ್ಲ. ಇಂಗ್ಲಿಷ್ ಮಾಧ್ಯಮದ ಶಾಲೆಗಳಿಂದ ಸವಾಲಿದೆ. ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಹಾಗೂ ಇಂಗ್ಲಿಷ್ ಶಾಲೆಯಲ್ಲಿ ಕನ್ನಡವನ್ನು ಚೆನ್ನಾಗಿ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ವರ್ಷದ ಆಯವ್ಯಯದಲ್ಲಿ 200 ಕೋಟಿ ರೂ.ಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದ್ದು, ರಾಜ್ಯ ಹಣಕಾಸು ಇಲಾಖೆಯು ಶೇ.30ರಷ್ಟು ಅನುದಾನ ಕಡಿತಗೊಳಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಗತ್ಯವಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ವಿವರಿಸಿದರು.

ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಇಲಾಖೆಯ ಸಚಿವರಾಗಿದ್ದಾಗ ಕೆಲವು ಲೆಟರೆಡ್ ಟ್ರಸ್ಟ್‌ಗಳು ಇವೆ ಎಂಬ ಕಾರಣಕ್ಕೆ ಅನುದಾನ ನಿಲ್ಲಿಸಿದ್ದರು. ಈ ಬಗ್ಗೆ ಸೋಷಿಯಲ್ ಆಡಿಟ್ ಮಾಡಲು ನಿರ್ಧರಿಸಿದ್ದೇವೆ. ಇಲಾಖೆಯಲ್ಲಿ ನೋಂದಾಯಿಸಿಕೊಂಡ ಟ್ರಸ್ಟ್ ಗಳಿಗೆ ಅನುದಾನ ನೀಡದೇ ಇರುವುದು ಸರಿಯಲ್ಲ. ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ಪಡೆದು ಅನುದಾನ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ತಾತ್ಕಾಾಲಿಕವಾಗಿ ಅನುದಾನ ನೀಡುವುದನ್ನು ತಡೆ ಹಿಡಿಯಲು ಸೂಚಿಸಿದ್ದೇನೆ. ಇದೇ ಅಂತಿಮವಲ್ಲ. ಅರ್ಹ ಸಂಸ್ಥೆಗಳಿಗೆ ಅನುದಾನ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.