ಉದಯ್ಪುರ್, ಡಿ.9-ಭಾರತದ ಅತ್ಯಂತ ವೈಭವೋಪೇತ ವಿವಾಹ ಮಹೋತ್ಸವ ಎಂದೇ ಪರಿಗಣಿತವಾಗಿರುವ ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ರಾಜಸ್ಥಾನದ ಅರಮನೆಗಳ ನಗರಿ ಉದಯ್ಪುರ್ನಲ್ಲಿ ಗರಿಗೆದರಿದೆ.
ಡಿ.12 ರಂದು ನಡೆಯುವ ಇವರ ವಿವಾಹ ಮಹೋತ್ಸವಕ್ಕೆ ಪೂರ್ವವಾಗಿ ನಿನ್ನೆಯಿಂದಲೇ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಸಂಜೆ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ಬೋಯೆನ್ಸ್ ಸೇರಿದಂತೆ ಅನೇಕ ಖ್ಯಾತನಾಮರ ಸಂಗೀತ ಗೋಷ್ಠಿ ಇದೆ.
ಈ ಕಾರ್ಯಕ್ರಮವನ್ನು ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಾಕ್ಷೀಕರಿಸಲಿದ್ದಾರೆ.ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿರುವ ಮುಖೇಶ್ ಅಂಬಾನಿ ತಮ್ಮ ಮುದ್ದಿನ ಪುತ್ರಿ ಇಶಾ ಅಂಬಾನಿ ವಿವಾಹನವನ್ನು ಎಂದೂ ಕಂಡು ಕೇಳರಿಯದಂತೆ ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾರೆ.ವಿದೇಶಗಳ ಆಗರ್ಭ ಶ್ರೀಮಂತರು, ಖ್ಯಾತ ಉದ್ಯಮಿಗಳು, ರಾಜಕೀಯ ಮುಖಂಡರು ಸೇರಿದಂತೆ ಅತಿ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.