ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಹಣಕಾಸಿನ ಸಂಸ್ಥೆಗೆ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿ: ವಿ ಸಿ ಹಿರೇಮಠ
ತಾಳಿಕೋಟಿ 17: ಹಣಕಾಸಿನ ಸಂಸ್ಥೆಯನ್ನು ನಡೆಸುವವರು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿರಬೇಕು, ಸಂಸ್ಥೆ ಕುರಿತು ಅವರಿಗೆ ಪ್ರಾಮಾಣಿಕ ಕಾಳಜಿ ಇರಬೇಕು. ಕೆಟ್ಟ ವ್ಯಕ್ತಿಗಳಿಂದಾಗಿ ಇಂದು ಎಷ್ಟೋ ಹಣಕಾಸಿನ ಸಂಸ್ಥೆಗಳು ಹಾಳಾಗಿ ಮುಚ್ಚಿ ಹೋಗಿವೆ ಆದ್ದರಿಂದ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸಿ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಹೇಳಿದರು. ಶುಕ್ರವಾರ ವಿ.ವಿ.ಸಂಘದ ಸಭಾಂಗಣದಲ್ಲಿ ತಾಳಿಕೋಟಿ ಸಹಕಾರಿ ಬ್ಯಾಂಕ್ ಚುನಾವಣೆ ಅಂಗವಾಗಿ ಹಮ್ಮಿಕೊಂಡ ಅಭ್ಯರ್ಥಿಗಳ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹಳೆಯ ಪೆನಲ್ ಅಭ್ಯರ್ಥಿಗಳು ಈ ಬ್ಯಾಂಕಿನಲ್ಲಿ ಉತ್ತಮ ಆಡಳಿತ ನಡೆಸಿ ಬ್ಯಾಂಕ್ ನ್ನು ಅಭಿವೃದ್ಧಿಯಡೆಗೆ ತೆಗೆದುಕೊಂಡು ಹೋಗಿದ್ದಾರೆ ಅವರನ್ನು ಮತ್ತೇ ಗೆಲ್ಲಿಸಲು ಮತ ಆಶೀರ್ವಾದ ಮಾಡಿ ಎಂದರು. ಪುರಸಭೆ ಸದಸ್ಯ ವಾಸುದೇವ ಹೆಬಸೂರ ಮಾತನಾಡಿ ಕೇಶಲ 25 ಸಾವಿರ ಬಂಡವಾಳದೊಂದಿಗೆ ಆರಂಭಗೊಂಡ ಈ ಬ್ಯಾಂಕು ಇಂದು 225 ಕೋಟಿ ಬಂಡವಾಳವನ್ನು ಹೊಂದಿದೆ, ಇದಕ್ಕೆ ನಮ್ಮ ಹಿರಿಯರ ತ್ಯಾಗ ಬಹಳಷ್ಟು ಇದೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಈ ಪೆನಲ್ ನವರು ಕೆಲಸ ಮಾಡುತ್ತಾ ಬಂದಿದ್ದಾರೆ ಅವರಿಗೆ ನೀವು ಮತ್ತೊಮ್ಮೆ ಮತ ಆಶೀರ್ವಾದ ಮಾಡಿ ಆಯ್ಕೆಯಾಗಲು ಸಹಕರಿಸಿ ಎಂದರು.
ಓಲ್ಡ್ ಈಸ್ ಗೋಲ್ಡ್ ಪೆನಲ್ ಅಭ್ಯರ್ಥಿಗಳಾದ ಮುರಿಗೆಪ್ಪ ಸರಸಟ್ಟಿ, ಕಾಶಿನಾಥ ಸಜ್ಜನ ಹಾಗೂ ದ್ಯಾಮನಗೌಡ ಪಾಟೀಲ ಮಾತನಾಡಿ ಕಳೆದ ಕೆಲವು ಅವಧಿಗಳಿಂದ ಈ ಬ್ಯಾಂಕಿನ ನಿರ್ದೇಶಕರಾಗಿ ನಾವು ಅತ್ಯಂತ ಪ್ರಾಮಾಣಿಕವಾಗಿ ನಿಸ್ವಾರ್ಥ ಭಾವದಿಂದ ಬ್ಯಾಂಕಿನ ಏಳಿಗೆಗಾಗಿ ಕೆಲಸ ಮಾಡಿ ಎಲ್ಲ ವರ್ಗದ ಜನರ ಹಿತ ಕಾಯುತ್ತಾ ಬಂದಿದ್ದೇವೆ ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ನಮ್ಮದೇ ಆದ ಕೆಲವು ಯೋಜನೆಗಳಿವೆ ಇವುಗಳ ಅನುಷ್ಠಾನಕ್ಕಾಗಿ ಮತ್ತೇ ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು. ವಿವಿ ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಪ್ರಸ್ತಾವಿಕವಾಗಿ ಮಾತನಾಡಿ ಈ ಪೆನಲ್ ದವರು ಬ್ಯಾಂಕಿನ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಈಗಾಗಲೇ ನಾಲ್ಕು ಶಾಖೆಗಳಿದ್ದು ಇನ್ನೆರಡು ಶಾಖೆಗಳನ್ನು ತೆರೆಯಬೇಕೆಂಬುದು ಅವರ ಯೋಜನೆಯಾಗಿದೆ,ಅವರ ಗೆಲುವಿಗೆ ತಾವೆಲ್ಲರೂ ಆಶೀರ್ವಾದ ಮಾಡಬೇಕು ಎಂದರು.
ವಿ.ವಿ.ಸಂಘದ ಉಪಾಧ್ಯಕ್ಷ ಬಿ.ಎನ್. ಹಿಪ್ಪರಗಿ ಪೆನಲ್ ಅಭ್ಯರ್ಥಿಗಳಾದ ದತ್ತಾತ್ರೇಯ ಹೆಬಸೂರ, ಈಶ್ವರ್ಪ ಬಿಳೇಭಾವಿ, ಬಾಬು ಹಜೇರಿ, ಚಿಂತಪ್ಪಗೌಡ ಯಾಳಗಿ, ನಾಗಪ್ಪ ಚಿನಗುಡಿ, ಸುರೇಶ್ ಪಾಟೀಲ, ರಾಮಣ್ಣ ಕಟ್ಟಿಮನಿ, ಸಂಜೀವಪ್ಪ ಬರದೇನಾಳ,ರಾಮಪ್ಪ ಕಟ್ಟಿಮನಿ,ಗಿರಿಜಾಬಾಯಿ ಕೊಡಗಾನೂರು ಶೈಲಾ ಬಡದಾಳಿ ಹಾಗೂ ವಿ.ವಿ. ಸಂಘದ ಎಲ್ಲ ಅಂಗ ಸಂಸ್ಥೆಗಳ ಅಧ್ಯಕ್ಷರು ನಿರ್ದೇಶಕರು ಉಪನ್ಯಾಸಕರ ಹಾಗೂ ಸಿಬ್ಬಂದಿಗಳು ಇದ್ದರು. ನಿರ್ದೇಶಕ ಚನ್ನಮಲ್ಲು ಕತ್ತಿ ನಿರೂಪಿಸಿ ವಂದಿಸಿದರು.