ನವದೆಹಲಿ: 'ಮೋದಿ-ಜರ್ನಿ ಆಫ್‍ ಎ ಕಾಮನ್ ಮ್ಯಾನ್' ವೆಬ್‍ ಸೀರೀಸ್‍ಗೆ ಚುನಾವಣಾ ಆಯೋಗ ತಡೆ

ನವದೆಹಲಿ, 20: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ ' ಚಿತ್ರದ ಬಿಡುಗಡೆಗೆ ಕುರಿತು  ಚುನಾವಣಾ ಆಯೋಗ ಪರಾಮರ್ಶಿಸುತ್ತಿರುವ ಬೆನ್ನಲ್ಲೇ , ಅವರ ಜೀವನ ಪಯಣದ ಕುರಿತ 'ಮೋದಿ-ಜರ್ನಿ ಆಫ್‍ ಎ ಕಾಮನ್ ಮ್ಯಾನ್ ' ವೆಬ್ ಸೀರೀಸ್ ಪ್ರಸಾರದ ಮೇಲೆ ನಿರ್ಬಂಧ ಹೇರಿದೆ. 

ಈ ಕುರಿತು ಶನಿವಾರ ಆದೇಶ ನೀಡಿರುವ  ಆಯೋಗ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ಪಕ್ಷ ಇಲ್ಲವೇ ವ್ಯಕ್ತಿಗೆ ಸಂಬಂಧಿಸಿದ ಜೀವನಚಿತ್ರ ಇಲ್ಲವೇ ಚರಿತ್ರೆಯನ್ನೊಳಗೊಂಡ ಚಿತ್ರಗಳು, ವಿಡಿಯೋತುಣುಕುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. 

ಈ ವೆಬ್ ಸೀರೀಸ್ ದೇಶದ ಪ್ರಧಾನ ಮಂತ್ರಿ, ರಾಜಕೀಯ ಪಕ್ಷದ ನಾಯಕ ಹಾಗೂ ಚುನಾವಣಾ ಅಭ್ಯರ್ಥಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನಾಧರಿಸಿದ  ಸರಣಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಅದನ್ನು ಪ್ರಸಾರ ಮಾಡುವಂತಿಲ್ಲ. ಆದ್ದರಿಂದ ಆನ್‍ ಲೈನ್‍ ಪ್ರಸರಣವನ್ನು ತಕ್ಷಣ ಸ್ಥಗಿತಗೊಳಿಸಿ, ವೆಬ್ ಸೀರೀಸ್ ನ ಎಲ್ಲ ತುಣುಕುಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಆದೇಶದಲ್ಲಿ ಸೂಚಿಸಿದೆ. 

ಆದರೆ, ವೆಬ್‍ ಸೀರಿಸ್‍ ನ ನಿರ್ಮಾಪಕರು ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂಕೋರ್ಟ್ ಏ. 22ರಂದು ಈ ಕುರಿತು ಆಯೋಗದ ಪ್ರತಿಕ್ರಿಯೆ ಆಲಿಸಲಿದೆ.