ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು: ವಿಜಯ್ ಕುಮಾರ್

Education should be provided to the girl child: Vijay Kumar

ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು: ವಿಜಯ್ ಕುಮಾರ್ 

ಬಳ್ಳಾರಿ 15: ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದ್ದು, ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್‌.ವಿಜಯ್ ಕುಮಾರ್ ಅವರು ಹೇಳಿದರು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೈಕ್ ರಾ​‍್ಯಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ-ಬೇಟಿ ಪಡಾವೋ’ ಯೋಜನೆಯು 10 ವರ್ಷ ಪೂರೈಸಿದ್ದು, ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ತೊಡೆದುಹಾಕುವುದು. ಅದರ ಬಗ್ಗೆ ಜನರಲ್ಲಿರುವ ನಕಾರಾತ್ಮಕ ಮನೋಭಾವ ಬದಲಾಯಿಸುವುದು. ಹೆಚ್ಚಾಗಿ ನಡೆಯುತ್ತಿರುವ ಬಾಲ್ಯ ವಿವಾಹವನ್ನು ತಡೆಗಟ್ಟಿ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಹೆಣ್ಣು ಭ್ರೂಣ ಹತ್ಯೆಯು ಕಾನೂನು ಅಪರಾಧವಾಗಿದೆ. ಹೆಣ್ಣು ಸಮಾಜದ ಕಣ್ಣಾಗಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವರಿಗೆ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಪ್ರತಿಯೊಬ್ಬ ಹೆಣ್ಣುಮಗುವು ಶಾಲೆಯಿಂದ ಹೊರಗುಳಿಯದೇ ಶಿಕ್ಷಣ ಪಡೆಯಬೇಕು. ಕ್ಷೀಣಿಸುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಜಲಾಲಪ್ಪ ಎ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಸಿಡಿಪಿಒ ಅಧಿಕಾರಿಗಳು ಸೇರಿದಂತೆ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಇತರರು ಬೈಕ್ ರಾ​‍್ಯಲಿಯಲ್ಲಿ ಭಾಗವಹಿಸಿದ್ದರು.