ನಾಟಕ ಜನ ಸಾಮಾನ್ಯರ ಕಲೆ : ಡಾ. ಪರಮಶಿವಮೂರ್ತಿ

Drama is the art of common people: Dr. Paramashivamurthy

ನಾಟಕ ಜನ ಸಾಮಾನ್ಯರ ಕಲೆ : ಡಾ. ಪರಮಶಿವಮೂರ್ತಿ  

ಹಂಪಿ 07: ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಇಂದಿಗೂ ಪ್ರಚಲಿತದಲ್ಲಿರುವ ಕಲೆ ಎಂದರೆ ಅದು ನಾಟಕ. ಲಲಿತ ಕಲೆಗಳಲ್ಲಿ ಜನ ಸಾಮಾನ್ಯರಿಗೆ ಹತ್ತಿರದ ಕಲೆಯಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನ್ಯತ್ಯ ವಿಭಾಗ ವತಿಯಿಂದ 6ನೇ ಫೆಬ್ರವರಿ 2025ರಂದು ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ನಡೆದ ನಾಟಕ ರಚನೆ, ನಟನೆ ಹಾಗೂ ನಿರ್ದೇಶನದ ಹತ್ತು ದಿನದ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಟಕ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಗಾಧವಾದುದು. ಈ ಭಾಗದ ಅನೇಕ ನಾಟಕ ಕಲಾವಿದರು ತಮ್ಮ ಇಡೀ ಜೀವನವನ್ನು ನಾಟಕ ರಂಗಕ್ಕೆ  ಮುಡಿಪಾಗಿಟ್ಟಿದ್ದರು. ಇಂದಿಗೂ ಹಳ್ಳಿಗಳಲ್ಲಿ ಜಾತಿ, ಧರ್ಮದ ಭೇದ ವಿರದೆ  ಪ್ರತಿ ವರ್ಷವೂ ತಮ್ಮ ಊರುಗಳಲ್ಲಿ  ನಾಟಕ ಪ್ರದರ್ಶನ ನಡೆಯುತ್ತವೆ. ನಟನೆಗೆ ಪೂರ್ವ ಸಿಧ್ದತೆ ಅವಶ್ಯಕತೆ ಇದೆ ಅದಕ್ಕೆ ಬೇಕಾದ ಕಲೆಗಳನ್ನೆಲ್ಲಾ ಶಿಬಿರದಲ್ಲಿ ಕಲಿಯಿರಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಟಿ.ಬಿ.ಡ್ಯಾಂ ಹೊಸಪೇಟೆ ಕನ್ನಡ ಕಲಾ ಸಂಘ ಕಾರ್ಯದರ್ಶಿ ಚಂದ್ರಶೇಖರ್ ಎಸ್‌.ಎಸ್‌. ಅವರು ಮಾತನಾಡುತ್ತಾ ನಾಟಕ, ನಟನೆ, ನಿರ್ದೇಶನಗಳು ತ್ರಿವೇಣಿ ಸಂಗಮ ಎಂಬಂತೆ ಮೂರು ಕಲೆಗಳನ್ನು ಒಂದೇ ಶಿಬಿರದಲ್ಲಿ ಆಯೋಜನೆಗೊಂಡಿದೆ. ಕನ್ನಡ ಕಲಾ ಸಂಘ ಸತತ 6 ದಶಕಗಳಿಂದ ರಂಗಭೂಮಿಯ ಸೇವೆ ಮಾಡುತ್ತಿದೆ. ಕನ್ನಡ ವಿಶ್ವವಿದ್ಯಾಲಯ ನಮ್ಮನ್ನು ಗುರುತಿಸಿರುವುದು ಸಂತೋಷ ತಂದಿದೆ. ಕರ್ನಾಟಕದಲ್ಲಿ ನಾಟಕ, ರಚನೆ ,ನಿರ್ದೇಶನ ರಂಗಳಿಗೆ ಹಲವಾರು ಸಾಧಕರು ಸೇವೆಗೈದಿದ್ದಾರೆ. ಇಂದಿನ ಕಾಲದಲ್ಲಿ ನೃತ್ಯ, ಸಂಗೀತ, ನಾಟಕ ಅಗತ್ಯವಿದೆ ಅದಕ್ಕಾಗಿ ರಂಗಭೂಮಿ ಉಳಿಯುವುದು ಅತಿಮುಖ್ಯವಾಗಿದೆ ಎಂದರು. 

ಶಿಬಿರದ ನಿರ್ದೇಶಕ ರಂಗಕರ್ಮಿಗಳು ನೀನಾಸಂ(ಧಾರವಾಡ)ನ ಶ್ರೀಕಾಂತ ನವಿಲುಗರಿ ಅವರು ಮಾತನಾಡಿ ಕರ್ನಾಟಕದ ಪ್ರಸಿದ್ಧ ರಂಗಭೂಮಿಗಳಾದ ನೀನಾಸಂ, ರಂಗಾಯಣಗಳಂತೆ ಕನ್ನಡ ವಿಶ್ವವಿದ್ಯಾಲಯ ಸಹ ರೆಪಾರ್ಟಿ ಆಗಬೇಕು ಎಂಬುದು ನನ್ನ ಆಸೆ ಎಂದರು. 

ಶಿಬಿರದ ಮತ್ತೊಬ್ಬ ನಿರ್ದೇಶಕ ಬಾಗಲಕೋಟದ ರಂಗಕರ್ಮಿ ಶ್ರೀಹರಿ ಧೂಪದ ಮಾತನಾಡಿ ಡಾ.ಚಂದ್ರಶೇಖರ ಕಂಬಾರರ ಕನಸು ಕೇವಲ ಸಂಶೋಧನೆ, ವಿಮರ್ಶೆ, ಅಲ್ಲದೆ ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವುದು ಆಗಿದೆ ಎಂದರು. ಈ ಹಿಂದೆ ಹೊನ್ನ ಶೂಲಕ್ಕೇ ಎಂಬ ನಾಟಕವನ್ನು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಿದ್ದನ್ನು ನೆನೆದರು. 

ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳಾಡಿದ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಮಾತನಾಡಿ, ಕನ್ನಡ ವಿಶ್ವವಿದ್ಯಾಲಯ ಎಲ್ಲಾ ಲಲಿತ ಕಲೆಗಳ ಕೇಂದ್ರ ಆಗಬೇಕು ಎಂಬುದು ಡಾ.ಚಂದ್ರಶೇಖರ ಕಂಬಾರರ ಕನಸಾಗಿದೆ. ಆ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆ ಪ್ರತಿಭೆಗಳನ್ನು ಗುರುತಿಸಿ ಮುನ್ನಡೆಸುವವರು ಬೇಕು ಆ ಕಾರ್ಯವನ್ನು ಶಿಬಿರದಲ್ಲಿ ಮಾಡಲಾಗುವುದು ಎಂದರು. 

ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.