ಡಾ.ನಡುವಿನಕೇರಿಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ
ತಾಳಿಕೋಟಿ 31: ಪಟ್ಟಣದ ಪ್ರತಿಷ್ಠಿತ ಎಚ್‌ಎಸ್ ಪಾಟೀಲ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಡಾ.ಹಣಮಂತಪ್ಪ ಬಿ. ನಡುವಿನಕೇರಿ ಇವರಿಗೆ ಬಿ.ಬಿ. ಇಂಗಳಗಿಯ ಎಸ್.ಎಸ್.ವಿ.ವಿ. ಶಿಕ್ಷಣ ಸಂಸ್ಥೆ ಕೊಡ ಮಾಡುವ 2024- 25 ನೇ ಸಾಲಿನ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಮೂಲತಃ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದವರಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ. ಎಂಪೀಲ್ ಹಾಗೂ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದು ಪ್ರಸಕ್ತ ಪಟ್ಟಣದ ಎಚ್‌ಎಸ್ ಪಾಟೀಲ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು ಬಡ ದುರ್ಬಲ ಹಾಗೂ ತುಳಿತಕ್ಕೆ ಒಳಗಾದ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಅವರ ಈ ಸೇವಾ ಮನೋಭಾವವನ್ನು ಗುರುತಿಸಿ ಇದೀಗ ಅವರಿಗೆ ಬಿ.ಬಿ.ಇಂಗಳಗಿಯ ಎಸ್.ಎಸ್.ವಿ.ವಿ.ಸಂಸ್ಥೆಯ ಶಿಕ್ಷಣ ಸಂಸ್ಥೆಯಾದ ಯಶಸ್ವಿ ಸೈನಿಕ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ರಾಜುಗೌಡ ಪಾಟೀಲ, ಡಾ.ಪ್ರಭುಗೌಡ ಲಿಂಗದಳ್ಳಿ, ಪ್ರಭುಗೌಡ ಬಿರಾದಾರ ಅಸ್ಕಿ, ಸಿದ್ದು ಬುಳ್ಳಾ, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕಾಂಬಳೆ ಹಾಗೂ ಹಲವಾರು ಗಣ್ಯಮಾನ್ಯರು ಇದ್ದರು.