ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ -2009 ರ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆ
ಕಾರವಾರ 17: ಆರ್‌ಟಿಇ ಕಾಯ್ದೆ ಪ್ರಕಾರ ಶಾಲಾ ಶುಲ್ಕ ಭರಿಸಿಲ್ಲವೆಂಬ ಕಾರಣಕ್ಕೆ ಮಗುವಿನ ವರ್ಗಾವಣೆ ಪತ್ರ ತಡೆಹಿಡಿಯುವಂತಿಲ್ಲ. ಒಂದು ವೇಳೆ ತಡೆಹಿಡಿದರೇ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ ತಿಪ್ಪೇಸ್ವಾಮಿ ಹೇಳಿದರು.ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ -2009 ರ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಉಸ್ತುವಾರಿ ಅಧಿಕಾರಿಗಳಿಗೆ ಹಾಗೂ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರಿಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಹಾಗೂ ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ಕುರಿತು ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇತ್ತೀಚೆಗೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡದೇ ಸತ್ತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಆಯೋಗಕ್ಕೆ ಬರುತ್ತಿದ್ದು, ಈ ಬಗ್ಗೆ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಖಾಸಗಿ ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯಾಧ್ಯಾಪಕರ ಕೊಠಡಿಯಲ್ಲಿ ಆರ್‌ಟಿಇ ಸೆಲ್‌ನ ಸಂಪೂರ್ಣ ಮಾಹಿತಿಯುಳ್ಳ ಫಲಕವನ್ನು ಕಡ್ದಾಯವಾಗಿ ಅಳವಡಿಸಬೇಕು ಹಾಗೂ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಪಿಟಿಎ ರಚನೆ ಮಾಡಿ, ಪೋಷಕರು ಮತ್ತು ಆಡಳಿತ ಮಂಡಳಿ ಚರ್ಚಿಸಿ ಶುಲ್ಕ ನಿಗಧಿಪಡಿಸಬೇಕು ಹಾಗೂ ಈ ಸಂಬಂಧ ಅಗತ್ಯ ದಾಖಲೆಗಳನ್ನು ಇಡಬೇಕು ಎಂದರು.ಮಕ್ಕಳ ರಕ್ಷಣಾ ನೀತಿ-2016 ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016 ಅನುಷ್ಠಾನಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ಗುಣಮಟ್ಟದ ಕಲಿಕೆಯ ಜೊತೆ ಮಕ್ಕಳ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿ-2016 ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸಬೇಕು. ಸರ್ಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದರು.ಶಾಲೆ ಬಿಟ್ಟ ಮಕ್ಕಳಿಗೆ ಕೇವಲ ಮನವೊಲಿಕೆ ಅಥವಾ ನೋಟಿಸ್ ನೀಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಮಕ್ಕಳು ಯಾವ ಕಾರಣಕ್ಕೆ ಶಾಲೆ ಬಿಟ್ಟಿದ್ದಾರೆ ಎಂಬದುರ ಕುರಿತು ನಿರ್ದಿಷ್ಟ ಕಾರಣ ಗುರುತಿಸಿ ರಚನಾತ್ಮಕ ಪರಿಹಾರ ನೀಡಬೇಕು. ಶಾಲೆ ಬಿಟ್ಟ ಮಕ್ಕಳ ತಾಲೂಕುವಾರು ಪಟ್ಟಿ ತಯಾರಿಸಿ ಪ್ರತಿ 3 ತಿಂಗಳಿಗೊಮ್ಮೆಸಿಡಬ್ಲೂಯುಸಿ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಯಿಂದ ಸಮಸ್ಯೆ ಮತ್ತು ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಿದಾಗ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು.ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಗಳಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯಿದ್ದು, ಈ ಸಮಿತಿಯಲ್ಲಿ ಮುಖ್ಯೋಪಾಧ್ಯಾಯರು ಸದಸ್ಯರಾಗಿದ್ದು, ಮಕ್ಕಳ ರಕ್ಷಣಾ ಕುರಿತಂತೆ, ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಜೆಂಡಾ ಮಾಡುವ ಮೂಲಕ ಸಮಸ್ಯೆ ಬಗೆಹರಿಸಬೇಕು. ಶಾಲೆಗಳಲ್ಲಿ ಶಾಲಾ ಸಂಸತ್ತು ಸೃಜನಶೀಲವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದ ಅವರು, ಶಾಲೆಯಲ್ಲಿ ರಚನೆಗೊಂಡ ಎಸ್‌ಡಿಎಂಸಿ ಸಮಿತಿ ಮಾಡಿದರೇ ಸಾಲದು ಆ ಸಮಿತಿ ನಿಯಮಿತವಾಗಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಮಾಡಿ ನಡಾವಳಿ ಮಾಡಿ ಕಡತ ನಿರ್ವಹಣೆ ಮಾಡಬೇಕು. ಮಕ್ಕಳ ಹಕ್ಕು ಗ್ರಾಮ ಸಭೆಯಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವದ ಜತೆಗೆ ಸ್ಥಳೀಯ ಸರ್ಕಾರದ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯುತ್ತದೆ. ತೆರೆದ ಮನೆ ಕಾರ್ಯಕ್ರಮದಲ್ಲಿ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯ ಕುರಿತು ಎಲ್ಲಾ ಶಾಲೆಗಳ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಗುಣಮಟ್ಟದ ಆಹಾರ ಒದಗಿಸುವಂತೆ ತಿಳಿಸಿದರು.ಅತಿಥಿ ಶಿಕ್ಷಕರಿಗೆ ಜೆ.ಜೆ. ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಆರ್.ಟಿ.ಇ ಪೊಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ನೀತಿ ಕುರಿತು ಕಡ್ಡಾಯವಾಗಿ ತರಬೇತಿ ನೀಡಬೇಕು ಮತ್ತು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪೊಲೀಸ್ ವೆರಿಫಿಕೇಶನ್ ಕಡ್ಡಾಯವಾಗಿ ಮಾಡಬೇಕು. ಅನಧಿಕೃತವಾಗಿ ಕೋಚಿಂಗ್ ಸೆಂಟರ್‌ಗಳಿದ್ದರೆ ನೋಟಿಸ್ ನೀಡಬೇಕು ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಚಿಂಗ್ ಸೆಂಟರ್ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಎಲ್ಲಾ ತಾಲೂಕು ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಉಸ್ತುವಾರಿ ಅಧಿಕಾರಿಗಳು ಮತ್ತಿತರರು ಇದ್ದರು...