ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಲ್ಲಾ ಪ್ರವಾಸ

District In-charge Minister Shivananda Patil District Tour

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಲ್ಲಾ ಪ್ರವಾಸ 

ಹಾವೇರಿ 25 : ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಜನವರಿ 26 ಹಾಗೂ 27 ರಂದು ಜಿಲ್ಲೆಯಲ್ಲಿ ಪ್ರವಾಸಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 

ಜ.26 ರಂದು ಬೆಳಿಗ್ಗೆ 8ಕ್ಕೆ ಹುಬ್ಬಳ್ಳಿಯಿಂದ ಹೊರಟು, 9 ಗಂಟೆಗೆ ಹಾವೇರಿಗೆ ಆಗಮಿಸಿ, ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. 

 ಜ.27 ರಂದು  ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಬೆಳಿಗ್ಗೆ 11 ಗಂಟೆಗೆ  ಹಾವೇರಿಗೆ ಆಗಮಿಸಿ,  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಾವೇರಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ ಕುರಿತು ತ್ರೈಮಾಸಿಕ ಕೆಡಿಪಿ ಸಭೆಯ ಮುಂದುವರೆದ ಭಾಗವಾಗಿ ಎರಡನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ.  

ಮೈಕ್ರೋ ಫೈನಾನ್ಸ್‌ಗಳು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡುವಂತಿಲ್ಲ 

-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ 

ಹಾವೇರಿ 25 : ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್‌ಗಳು ಸಾಲಗಾರರಿಂದ ಒತ್ತಾಪೂರ್ವಕವಾಗಿ ಸಾಲ ವಸೂಲಿಗೆ ಮುಂದಾಗಬಾರದು. ಆರ್‌.ಬಿ.ಐ ಮಾರ್ಗಸೂಚಿ 2022ರ ಅನುಸಾರ ಕಾರ್ಯನಿರ್ವಹಿಸಬೇಕು ಎಂದು  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಖಡಕ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲೆಯ ಮೈಕ್ರೋ ಪೈನಾನ್ಸ್‌ ಸಭೆ ನಡೆಸಿದ ಅವರು, ಸಾಲಗಾರರ ಮನೆ ಬಾಗಿಲಲ್ಲಿ ಕುಳಿತುಕೊಳ್ಳುವುದು ಹಾಗೂ ಕೆಲಸ ಸ್ಥಳಗಳಿಗೆ ಹೋಗಿ ಸಾಲ ಮರುಪಾವತಿಗೆ ಪಟ್ಟುಹಿಡುವುದು ಕಿರುಕುಳ ನೀಡುತ್ತಿರುವುದು ಕಂಡುಬರುತ್ತಿದೆ. ರಾಣೇಬೆನ್ನೂರಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,  ಮೈಕ್ರೋ ಫೈನಾನ್ಸ್‌ಗಳು ಸಾಲಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಅವರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು  ಅವರಿಗೆ ಸಾಲ ಮರುಪಾವತಿಗೆ  ಕಾಲಾವಕಾಶ ನೀಡಬೇಕು ಎಂದು ಸೂಚಿಸಿದರು.  

ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡುವಾಗ ನಿಯಮಾನುಸಾರ ಮಾನದಂಡಗಳ ಪ್ರಕಾರ ಸಾಲ ನೀಡಬೇಕು. ದಾಖಲೆಗಳನ್ನು ಕೂಲಕುಂಷವಾಗಿ ಪರೀಶೀಲಿಸಿ, ಅರ್ಹ ವ್ಯಕ್ತಿಗಳಿಗೆ ಮಾತ್ರ ಸಾಲ ನೀಡಬೇಕು. ಯಾರದೋ ಹೆಸರಿನಲ್ಲಿ ಇನ್ನಾರಿಗೋ ಸಾಲ ನೀಡಬಾರದು. ಸಾರ್ವಜನಿಕರಿಗೆ ಸಾಲದ ಅವಶ್ಯಕತೆ ಇದ್ದರೆ ಮಾತ್ರ ಸಾಲ ವಿತರಣೆ ಮಾಡಿ.  ನೀವಾಗೇ ಸಾಲ ಕೊಟ್ಟು ನಂತರ ಸಾಲ ಮರುಪಾವತಿಗೆ ಅವರಿಗೆ ಒತ್ತಡ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಎಚ್ಚರಿಕೆ ನೀಡಿದರು.  

ಕಳೆದ 2024-ಸೆಪ್ಟೆಂಬರ್ ಮಾಹೆ ಮೊದಲ ವಾರದಲ್ಲಿ  ರಾಣೇಬೆನ್ನೂರಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಈ ಕುರಿತು ನಿರ್ದೇಶನ ನೀಡಲಾಗಿತ್ತು ಎಂದರು.  

ಇದು ಮದ್ಯಮ ಹಾಗೂ ಬಡ ವರ್ಗದ ಜನರ ಸಮಸ್ಯೆಯಾಗಿರುವುದಿಂದ ಅತ್ಯಂತ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. 2022ರ ಆರ್‌.ಬಿ.ಐ. ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಮಾರ್ಗಸೂಚಿ ಅನ್ವಯ ಬೆಳಿಗ್ಗೆ 9 ರಿಂದ ಸಂಜೆ 6ಗಂಟೆಯ ಒಳಗೆ ಮಾತ್ರ  ಸಾಲ ವಸೂಲಾತಿಗೆ ಅವಕಾಶವಿದೆ. ಇದು ಬಿಟ್ಟು ಬೇರೆ ಸಮಯದಲ್ಲಿ ಹಾಗೂ ಅವರು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಅವರನ್ನು ಭೇಟಿಯಾಗಿ ಸಾಲ ವಸೂಲಿಗೆ ಮುಂದಾಗುವಂತಿಲ್ಲ. ಹಾಗೂ ಪದೇ ಪದೇ ಫೋನ್ ಕರೆ ಮಾಡಿ ಸಾಲಗಾರರ ಮನಸ್ಸಿಗೆ ಹಾಗೂ ಮರ್ಯಾದೆಗೆ ಕುಂದುಬರದಂತೆ  ನೋಡಿಕೊಳ್ಳಬೇಕು.ಸಂಬಂದಿಕರು, ಸ್ನೇಹಿತರಿಗೆ ಕಿರುಕುಳ ನೀಡುವುದು ಮತ್ತು ಸಾಲಗಾರರ ಹೆಸರನ್ನು ಪ್ರಕಟಿಸಬಾರದು, ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಾತಿಗೆ ಗ್ರಾಹಕರ ಮೇಲೆ ದೌರ್ಜನ್ಯ ನಡೆಸುವಂತಿಲ್ಲ, ಬೆದರಿಕೆ ಅಥವಾ ನಿಂದನೀಯ ಭಾಷೆ ಬಳಸಬಾರದು ಹಾಗೂ ಅವರೊಂದಿಗೆ  ಸೌಜನ್ಯದಿಂದ ವರ್ತಿಸಬೇಕು.  ಈಗಾಗಲೇ ರಾಣೇಬೆನ್ನೂರ  ವ್ಯಾಪ್ತಿಯಲ್ಲಿ13  ಪ್ರಕರಣಗಳು ದಾಖಲಾಗಿದ್ದು, ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು.  ಕಾನೂನು ಪ್ರಕಾರ ಸಾಲ ವಸೂಲಿಮಾಡಿ, ಸಾಲಗಾರರ ಮೇಲೆ ಮೈಕ್ರೋ ಫೈನಾನ್ಸ್‌ ನವರು  ಅನಗತ್ಯ ದೌರ್ಜನ್ಯ ನಡೆಸುವುದು, ಹಾಗೂ ವಸೂಲಾತಿಗೆ ಕಠಿಣ ವಿಧಾನ ಗಳಲ್ಲಿ ತೊಡಗಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

ಲೀಡ್ ಬ್ಯಾಂಕ್  ವ್ಯವಸ್ಥಾಪಕ ಅಣ್ಣಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ 26 ಮೈಕ್ರೋ ಫೈನನಸ್ಗಳು ಕಾರ್ಯನಿರ್ವಹಿಸುತ್ತಿದ್ದು,  ನವ ಚೇತನ ಫೈನಾನ್ಸ್‌ ನಡಿ ಯಲ್ಲಿ ಎಲ್ಲ ಜಿಲ್ಲೆಯ ಮೈಕ್ರೋ ಫೈನಾನ್ಸ್‌ಗಳು ಕಾರ್ಯನಿರ್ವಹುಸುತ್ತಿವೆ ಎಂದು  ಸಭೆಗೆ ಮಾಹಿತಿ ನೀಡಿದರು.    

ನವಚೇತನ ಫೈನಾನ್ಸ್‌ ಕೊಟ್ಟೂರಗೌಡ್ರ ಅವರು ಮಾತನಾಡಿ,  ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್‌ಗಳು ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡದಂತೆ  ಕ್ರಮವಹಿಸಲಾಗುವುದು ತಿಳಿಸಿದರು.  

ಜಿಲ್ಲೆಯ ಮೈಕ್ರೋ ಫೈನಾನ್ಸ್‌ ಪ್ರತಿನಿಧಿಗಳು,  ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ 18 ಸಾಧಕರಿಗೆ ಸನ್ಮಾನ 

ಹಾವೇರಿ 25 : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರನ್ನು  ಹಾಗೂ ವಿವಿಧ  ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ 18 ಜನರನ್ನು  ಜನವರಿ 26 ರಂದು ಜಿಲ್ಲಾಡಳಿತದಿಂದ  ಗಣರಾಜ್ಯೋತ್ಸವ ಸಮಾರಂಭದಲ್ಲಿ  ಸನ್ಮಾನಿಸಲಾಗುತ್ತಿದೆ. 

 ವೈದ್ಯಕೀಯ ಕ್ಷೇತ್ರದಿಂದ  ಶ್ರೀಮತಿ ಸಾವಿತ್ರಿ ಪಟಗಾರ, ಕ್ರೀಡಾ ಕ್ಷೇತ್ರದಿಂದ ಬ್ಯಾಡಗಿ ತಾಲೂಕು ಮುತ್ತೂರಿನ ಕು.ಲಕ್ಷ್ಮೀ ಶಿಂಗ್ರಿ,  ವಿಶೇಷ ಕ್ಷೇತ್ರದಿಂದ  ಮಾರನಬೀಡ ದೈಹಿಕ ಶಿಕ್ಷಕ ಆನಂದ ಗ್ವಾಡಿಹಾಳ, ಜೇಕಿನಕಟ್ಟಿಯ ಕು.ಅನುಷಾ ಹಿರೇಮಠ, ಶಿಕ್ಷಣ ಕ್ಷೇತ್ರದಿಂದ ಹಾವೇರಿಯ ಗೋವಿಂದರಾಜ ಕಡಕೋಳ, ಶೌರ್ಯ ಕ್ಷೇತ್ರದಿಂದ ಕರ್ಜಗಿಯ ಸಿದ್ದಲಿಂಗಸ್ವಾಮಿ ಚರಂತಿಮಠ, ಸಂಕೀರ್ಣ ಕ್ಷೇತ್ರದಿಂದ  ಹಾವೇರಿಯ ಪೃಥ್ವಿರಾಜ ಬೆಟಗೇರಿ, ಪರಿಸರ ಕ್ಷೇತ್ರದಿಂದ  ಹಾವೇರಿಯ ಶ್ರೀಮತಿ ಜುಬೇದಾ ನಾಯಕ ಅವರನ್ನು  ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.  

ಸಮಾಜ ಸೇವೆ ಕ್ಷೇತ್ರದಿಂದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರೀವೀಕ್ಷಣಾಧಿಕಾರಿ ಮುನಿಶ್ವರ ಎಚ್‌.ಚೂರಿ, ಹಾಗೂ ಕನಕಾಪೂರದ ಫಕ್ಕೀರಗೌಡ ಗಾಜಿಗೌಡ್ರ, ರೈತ ಧ್ವನಿಯ ಬಂಕಾಪುರದ ಬಸವರಾಜ ಕುರಗೋಡಿ, ವಿಜ್ಞಾನ ಕ್ಷೇತ್ರದಿಂದ  ಶ್ರೀಮತಿ ರೇಣುಕಾ ಗುಡಿಮನಿ, ಸಂಘ-ಸಂಸ್ಥೆಯಿಂದ  ಮಕರಂದ ಸ್ವರ ಸಂಗೀತ ಕಾಲ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಬಿಷ್ಟನಗೌಡ್ರ, ಪತ್ರಿಕೋದ್ಯಮದಿಂದ ಮೂಡಣ ಪತ್ರಿಕೆ ಸಂಪಾದಕರಾದ ಶ್ರೀಮತಿ ತೇಜಶ್ವಿನಿ ಕಾಶೆಟ್ಟಿ ಹಾಗೂ  ಬಿ ಟಿವಿ ವರದಿಗಾರ ಪ್ರಶಾಂತ ಮರಿಯಮ್ಮನವರ, ಕನ್ನಡಪರ ಸಂಘಟನೆಯಿಂದ  ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರು,   ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗೀರೀಶ ಬಾರ್ಕಿ  ಹಾಗೂ ಕಾರ್ಯನಿರ್ವಾಹಕ ಅಭಿಯಂತರ ಮಲ್ಲೇಶಪ್ಪ ಮೆಡ್ಲೇರಿ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ. 


ಶ್ರೀ ಸಂತ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ  

ಹೆಸ್ಕಾಂ ಅಧ್ಯಕ್ಷ ಅಜೀಮಪೀರ ಖಾದ್ರಿ  ಮನವಿ 

ಹಾವೇರಿ 25 :  ಶ್ರೀ ಸಂತ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು 2025-26ನೇ ಸಾಳಿನ ಆಯವ್ಯದಲ್ಲಿ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ  ಶುಕ್ರವಾರ  ಹೆಸ್ಕಾಂ ಅಧ್ಯಕ್ಷರಾದ ಸೈಯದ ಅಜೀಮಪೀರ ಖಾದ್ರಿ ಅವರು ಮನವಿ ಮಾಡಿದ್ದಾರೆ. 

ಈ ಕುರಿತು  ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ.ಪಾಟೀಲ, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಹಿಂದುಳಿದ ವರ್ಗಗಳು, ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರಿಗೆ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರಿಗೂ ಮನವಿ ಸಲ್ಲಿಸಲಾಗಿದೆ. 

ಶಿಗ್ಗಾಂವ ತಾಲೂಕಿನ ಶಿಶುವಿನಹಾಳ ಗ್ರಾಮದ  ಶ್ರೀ ಸಂತ ಶಿಶುನಾಳ ಶರೀಫರು ಇಡೀ ಜಗತ್ತುಗೆ ಭಾವೈಕ್ಯತೆಯ ಸಂದೇಶ ಸಾರಿ, ಅಸಂಖ್ಯಾತ ತತ್ವಪದಗಳ ಮೂಲಕ ಸಮಾನತೆ, ಸಹಕಾರ, ಸಹಬಾಳ್ವೆ ಬೋಧಿಸಿ, ಗುರು ಗೋವಿಂದ ಭಟ್ಟರನ್ನು ಗುರುವಾಗಿ ಸ್ವೀಕರಿಸಿ “ಗುರು-ಶಿಷ್ಯ” ಪರಂಪರೆಯನ್ನು ಶಾಶ್ವತವಾಗಿ ಜನಮಾನಸಲ್ಲಿ ಬಿತ್ತಿ ಹೋದಿದ್ದಾರೆ. ಅವರ ಸಮಕಾಲೀನವರ ಪರಂಪರೆಯನ್ನು ನಿರಂತರವಾಗಿ ಮುಂದಿನ ಪೀಳಿಗೆಗೆ ಪರಿಚಯಿಸುವ ಗುರುತರ ಕಾರ್ಯ ಮಾಡುವ ನಿಟ್ಟಿನಲ್ಲಿ 2025-26ನೇ ಸಾಲಿನ ಆಯವ್ಯದಲ್ಲಿ   ಶ್ರೀ ಸಂತ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.