ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಪರವಾಗಿದೆ : ಡಾ. ಶೋಭಾರಾಣಿ
ಬಳ್ಳಾರಿ 09: ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಟ್ಟಡದ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಡಿಟೋರಿಯಂ ಅನ್ನು ಮೇಯರ್ ಮುಲ್ಲಂಗಿ ನಂದೀಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅವರು ಜಂಟಿಯಾಗಿ ಸೋಮವಾರ ಉದ್ಘಾಟಿಸಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು, ಈ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದೆ.
ಈ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಮಹಾನಗರ ಪಾಲಿಕೆಯು ಸಂಪೂರ್ಣ ಸಹಕಾರ ನೀಡಲಿದೆ. ಅಲ್ಲದೇ, ಸಂಸ್ಥೆ ಹಮ್ಮಿಕೊಳ್ಳುವ ಯಾವುದೇ ಜನಪರ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅವರು, ಈ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿ ಅಧ್ಯಕ್ಷ ಯಶವಂತರಾಜ ನಾಗಿರೆಡ್ಡಿ ಅವರು ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.
ಸಂಸ್ಥೆಯು ಭವಿಷ್ಯದಲ್ಲಿ ಮತ್ತಷ್ಟು ಜನಪರವಾಗಲಿ ಎಂದು ಶುಭ ಹಾರೈಸಿದರು. ಈ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಸ್ವಾಗತ ಕೋರಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೆ ಸೇವೆ ಸಲ್ಲಿಸುತ್ತಿದೆ. ಅಲ್ಲದೇ, ವಾಣಿಜ್ಯೋದ್ಯಮಿಗಳ, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ತೆರಿಗೆ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಗೃಹ ಇಲಾಖೆ, ಕಂದಾಯ ಇಲಾಖೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆ ನಿರಂತರ ಸಂಪರ್ಕ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡುತ್ತಿದೆ ಎಂದರು.
ಈ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರೆ್ಣ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ಉಪಾಧ್ಯಕ್ಷರುಗಳಾದ ಎಸ್.ದೊಡ್ಡನಗೌಡ, ಸೊಂತಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿಗಳಾದ ಪಿ. ಪಾಲಣ್ಣ ಹಾಗೂ ಎಲ್ಲಾ ಪಧಾದಿಕಾರಿಗಳು, ಉಪಕಮಿಟಿ ಚೇರ್ಮನ್ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.