ನಾಡ ಸಂಸ್ಕೃತಿ ಅಭ್ಯುದಯಕ್ಕೆ ಧಾರವಾಡದ ಕೊಡುಗೆ ಶ್ರೇಷ್ಠವಾದುದು
ಧಾರವಾಡದ ರಂಗಾಯಣದ ವಿಶಿಷ್ಠ ಚಿಣ್ಣರ ಮೇಳ ಧಾರವಾಡ ಎಂತಹವರನ್ನು ಆಕರ್ಷಿಸುವ ಸುಂದರಿ ನಗರಿ ಕಲೆ, ಸಾಹಿತ್ಯ, ಸಂಗೀತದಿಂದ ಹೆಸರುವಾಸಿ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿದ್ಯಾಲಯ, ಕರ್ನಾಟಕ ಪ್ರಾದೇಶಿಕ ವಿಜ್ಞಾನ ಸಂಸ್ಥೆ, ಕೆ,ಸಿ ಡಿ ಕಾಲೇಜು, ಐ. ಐ ಟಿ ಸಂಸ್ಥೆ ಇನ್ನಿತರ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಕಾಶಿ ಎಂತಲೇ ಹೆಸರು ವಾಸಿಯಾದ ನಗರ. ಇಲ್ಲಿನ ಪೇಡಾದಷ್ಟೆ ಸಿಹಿ ಹೃದಯದವರು ಇಲ್ಲಿನ ಜನರು. ನಾಡ ಸಂಸ್ಕೃತಿ ಅಭ್ಯುದಯಕ್ಕೆ ಧಾರವಾಡದ ಕೊಡುಗೆ ಶ್ರೇಷ್ಠವಾದುದು. ಈ ಭಾಗದಲ್ಲಿ ರಂಗ ಕಲೆಗೆ ಪ್ರೋತ್ಸಾಹ ನೀಡಬೇಕು. ಕಲೆ ಕಲಾವಿದರನ್ನು ಬೆಳೆಸಬೇಕು ಪೋಷಿಸಬೇಕು. ಈ ಮೂಲಕ ನಮ್ಮ ಸಂಸ್ಕೃತಿ ಉಳಿಯಬೇಕು ಎಂಬ ಸದಾಶಯದೊಂದಿಗೆ ಧಾರವಾಡದಲ್ಲಿ ಹುಟ್ಟಿಕೊಂಡ ಸಂಸ್ಥೆ ರಂಗಾಯಣ. ರಂಗಾಯಣ ರಂಗ ಕಲೆಯನ್ನು ಈ ಭಾಗದಲ್ಲಿ ಪಸರಿಸುವ ಮೂಲ ಉದ್ದೇಶ ಹೊಂದಿದ್ದರೂ ಇದರೊಂದಿಗೆ ಇತರ ಕಲೆಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ. ವರ್ಷಪೂರ್ತಿ ಹತ್ತಾರು ನಾಟಕಗಳ ಪ್ರದರ್ಶನ, ಜನಪದ ಕಲೆಗಳ ಪ್ರದರ್ಶನ ಇತ್ಯಾದಿ ಏರಿ್ಡಸುವದರ ಜೊತೆಗೆ ಪ್ರತಿವರ್ಷ ಬೇಸಿಗೆ ರಜೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿರಲಿ ಎಂಬಂತೆ ಚಿಣ್ಣರ ಮೇಳ ವಿಶಿಷ್ಟ ವಿಶೇಷ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಇದೇ ತಿಂಗಳು ಹತ್ತನೆಯ ತಾರೀಖಿನಿಂದ ಈ ವರ್ಷದ ಬೇಸಿಗೆ ಶಿಬಿರ ನಗು ಮಗು ನಮ್ಮ ಸಂವಿಧಾನ ನಮ್ಮ ಕಲರವ ಎಂಬ ಶೀರ್ಷೀಕೆಯಡಿ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಇತರ ಬೇಸಿಗೆ ಶಿಬಿರಿಗಳಿಗಿಂತ ಇದು ವಿಭಿನ್ನವಾಗಿ ನನಗೆ ಗೋಚರಿಸಿತು . ಮಕ್ಕಳು ವರ್ಷಪೂರ್ತಿ ಪಾಠ, ಓದು ಬರಹದಲ್ಲಿ ತೊಡಗಿರುತ್ತಾರೆ. ರಜೆಯಲ್ಲಿಯೂ ಅದೇ ಟ್ಯೂಶನ್ ಕ್ಲಾಸಿಗೆ ಹಾಕಿದರೆ ಮಕ್ಕಳ ಆಸಕ್ತಿ ಕುಂಠಿತವಾಗಬಹುದು. ಹೀಗಾಗಿ ಮಕ್ಕಳು ರಜೆಯನ್ನು ಆನಂದವಾಗಿ ಕಳೆಯಬೇಕು ಎಂಬ ಸದ್ದುದೇಶದೊಂದಿಗೆ ಮಕ್ಕಳಲ್ಲಿ ಹೊಂದಾಣಿಕೆ ಸ್ವಭಾವ, ಸಹಕಾರ ಗುಣ, ಧೈರ್ಯ ಬೆಳೆಯಬೇಕು. ಅವರಿಗೆ ನಮ್ಮ ಜನಪದ ಕಲೆಗಳ ಬಗ್ಗೆ ಪರಿಚಯವಾಗಬೇಕು. ಸಾಹಿತ್ಯ ಸಂಗೀತ, ಕಲೆ , ಸಿನಿಮಾ ನಾಟಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪರಿಚಯವಾಗಬೇಕು. ಮೂಢನಂಬಿಕೆಗಳು ದೂರವಾಗಬೇಕು. ಪವಾಡಗಳ ರಹಸ್ಯ ಬಯಲು ಕುರಿತು ತಿಳಿಯಬೇಕು. ಮಕ್ಕಳು ಹಾಡು, ನೃತ್ಯ ,ನಾಟಕಗಳಲ್ಲಿ ತೊಡಗಿಕೊಳ್ಳಬೇಕು. ಅವರ ಸಭಾಕಂಪನ ದೂರವಾಗಬೇಕು. ಮಕ್ಕಳ ಮೊಬೈಲ್ ಗೀಳು ಕಡಿಮೆಯಾಗಬೇಕು. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು. ಅವರನ್ನು ವಿಶ್ವಮಾನವರನ್ನಾಗಿ ರೂಪಿಸುವ ಬುನಾದಿ ಸಾಮರ್ಥ್ಯಗಳನ್ನು ಅವರಲ್ಲಿ ಬೆಳೆಸಬೇಕು ಎಂಬ ವಿವಿಧ ಸದಾಶಯದೊಂದಿಗೆ ಈ ಶಿಬಿರ ಪ್ರಾರಂಭವಾಗಿದ್ದು ಯೋಜನೆಯಂತೆ ಜರುಗುತ್ತಿದೆ.ಈ ಬೇಸಿಗೆ ಶಿಬಿರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ವಿವಿಧ ಪ್ರತಿಷ್ಠಿತ ಟ್ರಸ್ಟಗಳು ಕೈಜೋಡಿಸಿದ್ದು ಈ ಶಿಬಿರದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಸ್ವತಹ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಮೇಡಂನವರು ವಿಶೇಷ ಕಾಳಜಿ ವಹಿಸಿ ಶಿಬಿರವನ್ನು ವಿಶೇಷವಾಗಿ ವಿಭಿನ್ನವಾಗಿ ಮಾಡಲು ಮಾರ್ಗದರ್ಶನ ನೀಡಿದ್ದು ಶಿಬಿರದ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಶಿಬಿರವನ್ನು ಅರ್ಥಪೂರ್ಣವಾಗಿ ಜರುಗಿಸಲು ರಂಗಾಯಣದ ನಿರ್ದೇಶಕರಾದ ಶ್ರೀ ರಾಜು ತಾಳಿಕೋಟೆ ಹಾಗೂ ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಮೇಡಂ ಅವರು ವಿಶೇಷ ಕಾಳಜಿ ತೋರಿದ್ದಾರೆ. ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಅವರು ಇನ್ನಿತರ ಕಲಾ ಸಂಸ್ಥೆಗಳು ಸಹಕಾರ ನೀಡಿವೆ. ಒಟ್ಟಾರೆ ಸರ್ವರ ಸಹಕಾರದಿಂದ ಶಿಬಿರ ನೀರೀಕ್ಷಿತ ಯಶಸ್ಸಿನತ್ತ ಸಾಗುತ್ತಿದೆ. ಶಿಬಿರದ ನಿರ್ದೇಶಕರಾಗಿ ರಂಗಕರ್ಮಿ ಲಕ್ಷಣ ಫೀರಗಾರ ಅವರು ಜವಾಬ್ದಾರಿ ಹೊತ್ತಿದ್ದು ರಂಗಾಯಣ ಕಲಾವಿದರು ಸೇರಿದಂತೆ ಇತರ ಆಹ್ವಾನಿತ ಕಲಾವಿದರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಷ್ಟೆ ಅಲ್ಲದೇ ಚಿತ್ರಕಲೆ, ಸಂಗೀತ, ಹಾಡು, ಕಸದಿಂದ ರಸ, ಮಕ್ಕಳ ಹಕ್ಕುಗಳ ಜಾಗೃತಿ, ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಹೀಗೆ ಹತ್ತು ಹಲವು ವಿಶೇಷ ವಿಷಯಗಳನ್ನು ತಿಳಿಸಲು ಪ್ರಾತ್ಯಕ್ಷಿಕೆ ನೀಡಲು ವಿವಿಧ ವಿಶೇಷ ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುತ್ತಿರುವುದು ವಿಶೇಷ ಎನಿಸಿದೆ. ಚಂಚಲ ಮನಸ್ಸುಳ್ಳ ಮಕ್ಕಳ ಮನಸ್ಸನ್ನು ಸೆರೆಹಿಡಿದು ಅವರನ್ನು ನಲಿಯುವಂತೆ ಮಾಡುವುದು ಖುಷಿಯಾಗಿ ಕಲಿಯುವಂತೆ ಮಾಡುವುದು. ವಿವಿಧ ವಿಶೇಷ ಕಲಾ ಪ್ರಕಾರಗಳ ಮಾಹಿತಿ ಪಡೆಯುವಂತೆ ಮಾಡುವುದು ಸೇರಿದಂತೆ ಹತ್ತು ಹಲವಾರು ಚಟುವಟಿಕೆಗಳನ್ನು ಈ ಬೇಸಿಗೆ ಶಿಬಿರ ಒಳಗೊಂಡಿದೆ.