ಸಮಾಜ ಸ್ವಾಸ್ಥ್ಯವಾಗಲು ಭಕ್ತರು ಸ್ವಾಮೀಜಿಗಳಿಂದ ಮಾತ್ರ ಸಾಧ್ಯ
ರಾಣಿಬೆನ್ನೂರ 11: ಯಾವುದೇ ಮಠ, ಮಂದಿರ, ದೇವಸ್ಥಾನಗಳಲ್ಲಿ ಸ್ವಾಮೀಜಿಗಳಾದವರು ಪೂರ್ವಾಶ್ರಮದ ಸಂಬಂಧದಿಂದ ದೂರವಿದ್ದರೆ ಮಾತ್ರ ಆ ಸ್ವಾಮೀಜಿಗಳಿಗೂ, ಭಕ್ತರಿಗೂ ಹಾಗೂ ಸಮಾಜಕ್ಕೂ ಒಳ್ಳೆಯ ಹೆಸರು, ಗೌರವ ಬರಲು ಕಾರಣವಾಗುತ್ತದೆ ಎಂದು ಸಾಣೆಹಳ್ಳಿಯ ತರಳಬಾಳು ಜಗದ್ಗುರು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ಸುಕ್ಷೇತ್ರ ತಾಲೂಕಿನ ಐರಾವತ ಐರಣಿ ಹೊಳೆಮಠ ಮಹಾಸಂಸ್ಥಾನದಲ್ಲಿ ಏರಿ್ಡಸಿದ್ದ ಪಟ್ಟಾಭಿಷೇಕ ಮಹೋತ್ಸವ, ಸನ್ಯಾಸದೀಕ್ಷೆ, ನಾಣ್ಯಗಳ ತುಲಾಭಾರ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಹುತೇಕವಾಗಿ ಇಂದಿನ ಮಠಾಧೀಶರುಗಳು, ಸ್ವಾಮೀಜಿಗಳು, ಸನ್ಯಾಸಿಗಳು ಪೂರ್ವಾಶ್ರಮದ ಸಂಬಂಧ ಹೊಂದಿರುತ್ತಾರೆ ಎಂಬ ಆರೋಪಗಳು ಭಕ್ತರಿಂದ ಹಾಗೂ ಸಾರ್ವಜನಿಕರಿಂದ ಹೆಚ್ಚಾಗಿ ಕೇಳಿ ಬರುತ್ತಿವೆ. ಇಂತಹ ಗಂಭೀರವಾದ ಆರೋಪಗಳಿಂದ ಮುಕ್ತಿ ಹೊಂದಬೇಕಾದರೆ ಅವರುಗಳು ಪೂರ್ವಾಶ್ರಮದ ಸಂಬಂಧವನ್ನು ಕಡಿತಗೊಳಿಸಬೇಕು ಎಂದು ಶ್ರೀಗಳು ಕಠೋರವಾಗಿ ಹೇಳಿದರು.
ಈ ಸಮಾಜ ಸ್ವಾಸ್ಥ್ಯವಾಗಲು ಭಕ್ತರು ಸ್ವಾಮೀಜಿಗಳಿಂದ ಮಾತ್ರ ಸಾಧ್ಯ. ಬುದ್ಧಿವಂತ ಭಕ್ತರಿಗೆ ಅಂಜಿ ನಡೆಯುವ ಗುರುಗಳಿರಬೇಕು. ಗುರುವಿಗೆ ಅಂಜಿ ನಡೆಯುವ ಭಕ್ತರಿರಬೇಕು. ಗುರು ತಪ್ಪು ಮಾಡಿದಾಗ ಎಚ್ಚರಿಸುವ, ತಿದ್ದುವ ಉತ್ತಮ ಭಕ್ತ ಹಾಗೂ ಭಕ್ತ ತಪ್ಪು ಮಾಡಿದಾಗ ಅದನ್ನು ಕಠೋರವಾಗಿ ತಿದ್ದಿ, ಶಿಕ್ಷಿಸುವ ಕಾಯಕವನ್ನು ಗುರುವಾದವರು ಮತ್ತು ಸ್ವಾಮೀಜಿಗಳಾದವರು ಮಾಡಿದಾಗ ಮಾತ್ರ ಗುರು-ಭಕ್ತರಿಗೆ ನಿಜವಾದ ಗೌರವ ನೀಡಿದಂತೆ ಆಗುತ್ತದೆ ಎಂದು ನುಡಿದರು.
ಕರ್ನಾಟಕದಲ್ಲಿ ಮಠಗಳಿಗೆ, ಸ್ವಾಮೀಜಿಗಳಿಗೆ, ಮಂದಿರಗಳಿಗೆ ಕೊರತೆ ಇಲ್ಲ . ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಗುರುತರವಾದ ಜವಾಬ್ದಾರಿ ಸ್ವಾಮೀಜಿಗಳಲ್ಲಿದೆ. ಜಾತಿ, ಮತ, ಪಂಥ, ಪಕ್ಷ, ಭೇದ, ಭಾವ ಮಾಡದೆ ಸರ್ವರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾಯಕವನ್ನು ಸ್ವಾಮೀಜಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಕುಲಗೆಡುತ್ತಿರುವ ರಾಜಕೀಯ ಕ್ಷೇತ್ರವನ್ನು ಶುಚಿತ್ವಗೊಳಿಸುವ ಕಾಯಕವನ್ನು ಮಠ, ಮಂದಿರಗಳು ಮಾಡಬೇಕು. ಆದರೆ ಧಾರ್ಮಿಕ ಕ್ಷೇತ್ರಗಳು ಸಹ ಕುಲಗೆಟ್ಟರೆ ಅವುಗಳನ್ನು ಶುಚಿಗೊಳಿಸುವವರು ಯಾರು? ಎಂಬುದನ್ನು ಯೋಚಿಸಿದಾಗ ಉತ್ತರ ದೊರೆಯುವುದು ಕ್ಲಿಷ್ಟವಾಗುವುದು. ಪಟ್ಟಾಧ್ಯಕ್ಷರು ಸರ್ವರನ್ನು ಗಣನೆಗೆ ತೆಗೆದುಕೊಂಡು ನ್ಯಾಯ, ನೀತಿ, ಧರ್ಮದ ಮೂಲಕ ಧಾರ್ಮಿಕ ಕಾರ್ಯವನ್ನು ಸದಾಚಾರದಲ್ಲೇ ಮುಂದುವರಿಸಬೇಕು. ಸದ್ಗುಣಗಳ ಮೂಲಕ ಮಠದ ಏಳಿಗೆಯನ್ನು ಮಾಡಬೇಕು. ಅಂದಾಗ ಮಾತ್ರ ಆ ಮಠ, ಮಂದಿರಗಳಿಗೆ ಗೌರವ ಹೆಚ್ಚಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಗದಗದ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಗೃಹಸ್ತಾಶ್ರಮದಲ್ಲಿ ತೊಟ್ಟಿಲು ತೂಗುವದು ಸಹಜ. ಆದರೆ ಮಠದಲ್ಲಿ ತೊಟ್ಟಿಲು ತೂಗುವದು ಎಂದರೆ ಗುರುವಿನ ಕರಮಲಲ್ಲಿ ದೀಕ್ಷೆ ಪಡೆದ ಮಗು ತೊಟ್ಟಿಲು ತೂಗುತ್ತದೆ. ಅಂದರೆ ಆ ಮಗು ಪೂರ್ವಾಶ್ರದ ಸಂಭಂದವನ್ನು ಕಳಚಿಕೊಂಡಿರುತ್ತದೆ. ಇಂದು ಶ್ರೀಮಠದ ಪಟ್ಟಾಭಿಷೇಕ ಪಡೆದ ಸಿದ್ಧಾರೂಢ ಸ್ವಾಮಿಜಿ ಜಗದ ಬೆಳಕಾಗಲಿ ಎಂದು ಶುಭ ಕೋರಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಜಿ, ಕಾಗಿನಲೆ ಕನಕ ಗುರು ಪೀಠದ ನಿರಂಜನಾನಂದ ಸ್ವಾಮಿಜಿ, ಹೊನ್ನಾಳಿ ಹಿರೆಕಲ್ಮಠದ ವಡೆಯರ ಡಾಽ ಚನ್ನಮಲ್ಲಿಕಾರ್ಜುನ ಶ್ರೀಗಳು, ಕೊಳ್ಳೂರಿನ ಬಸವಾನಂದ ಭಾರತಿ ಶ್ರೀಗಳು, ತುಮ್ಮನಕಟ್ಟಿಯ ಪ್ರಭುಲಿಂಗ ಶ್ರೀಗಳು, ಹದಡಿ ಚಂದ್ರಗಿರಿ ಮಠದ ಮುರಳಿಧರ ಶ್ರೀಗಳು, ಗಂಗಾಪುರ ಸಿದ್ಧಾರೂಢ ಮಠದ ಗುರುನಾಥರೂಢ ಶ್ರೀಗಳು, ರಾಣಿಬೆನ್ನೂರ ಒಳ್ಳೆಕುರುಬನ ದೇವಾಲಯದ ಫಾದರ ವಿವೇಕಪಾಲ ಸಿ.ಕೆ, ಕರ್ನಾಟಕ ಮುಸ್ಲಿಂ ಜಮಾತನ ಪ್ರಧಾನ ಕಾರ್ಯದರ್ಶಿ ಮೌಲಾನ ಅಬುಸುಫ್ಯಾನ ಮದನಿ ತಮ್ಮ ಉಪದೇಶಾಮೃತ ನೀಡಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಪಟ್ಟಾಭಿಷೇಕ ಪಡೆದ ಸಿದ್ಧಾರೂಢ ಸ್ವಾಮಿಜಿ, ವಿಧಾನ ಸಭಾ ಉಪಸಭಾಪತಿ ರುದ್ರ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಸತೀಶಗೌಡ ಮಲ್ಲನಗೌಡ್ರ, ಬಾಬಣ್ಣ ಐರಣಿಶೆಟ್ಟರ, ಸಿದ್ದನಗೌಡ ಗೋವಿಂದಗೌಡ್ರ ಸೇರಿ ಮತ್ತಿತರರು ಇದ್ದರು.